ನವದೆಹಲಿ, ಆ 02 (DaijiworldNews/DB): ವೀಸಾ ಷರತ್ತು ಉಲ್ಲಂಘನೆ ಹಾಗೂ ಅಕ್ರಮ ಚಟುವಟಿಕೆ ಆರೋಪದಡಿ ಕಳೆದ ಮೂರು ವರ್ಷಗಳಲ್ಲಿ 117 ಮಂದಿ ಚೀನಾ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರಾಯ್ ಈ ಕುರಿತು ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿ, ಭಾರತ ತೊರೆಯುವಂತೆ 2019 ಮತ್ತು 2021ರ ನಡುವೆ ಚೀನಾದ 81 ಪ್ರಜೆಗಳಿಗೆ ನೋಟಿಸ್ ನೀಡಲಾಗಿದೆ. 117 ಮಂದಿ ಗಡಿ ಪಾರಾಗಿದ್ದಾರೆ. ಅಲ್ಲದೆ, ವೀಸಾ ಷರತ್ತು ಉಲ್ಲಂಘನೆ ಮತ್ತು ಇತರೆ ಅಕ್ರಮ ಚಟುವಟಿಕೆ ಹಿನ್ನೆಲೆಯಲ್ಲಿ ಚೀನಾದ 726 ಮಂದಿಯನ್ನು ಪ್ರತಿಕೂಲ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ ಎಂದರು.
ಅಕ್ರಮವಾಗಿ ಭಾರತಕ್ಕೆ ಆಗಮಿಸಿ ಇಲ್ಲೇ ಠಿಕಾಣಿ ಹೂಡಿರುವ ವಿದೇಶಿಯರ ಬಗ್ಗೆ ಎಲ್ಲಾ ದಾಖಲೆ ಇಲಾಖೆ ಬಳಿ ಇದೆ. ಕೆಲವರು ಆರೋಗ್ಯ ಕಾರಣದಿಂದಾಗಿ ಉಳಿದುಕೊಂಡರೆ ಇನ್ನು ಕೆಲವರು ಉದ್ದೇಶಪೂರ್ವಕವಾಗಿ ಭಾರತದಲ್ಲಿ ಉಳಿದುಕೊಂಡಿದ್ದಾರೆ. ಅನಿವಾರ್ಯವಾಗಿ ಉಳಿದುಕೊಂಡವರಿಗೆ ದಂಡ ವಿಧಿಸಿ ಅವರ ವೀಸಾ ಅವಧಿ ವಿಸ್ತರಣೆ ಮಾಡಲಾಗುವುದು. ಆದರೆ ಉದ್ದೇಶಪೂರ್ವಕವಾಗಿ ಇರುವವರ ವಿರುದ್ಧ 1946ರ ವಿದೇಶಿ ಕಾಯ್ದೆ ಅನ್ವಯ ಕ್ರಮ ಕೈಗೊಂಡು ಭಾರತ ತೊರೆಯಲು ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.