ಬೆಂಗಳೂರು, ಆ 02 (DaijiworldNews/HR): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಈಗ ಬಂಧನ ಭೀತಿಯಿಂದ ಬಚಾವ್ ಆಗಿದ್ದು, ದೆಹಲಿ ವಿಶೇಷ ನ್ಯಾಯಾಲಯ ಶರತ್ತು ಬದ್ದ ಜಾಮೀನು ಮಂಜೂರು ಮಾಡಿದೆ ಎಂದು ತಿಳಿದು ಬಂದಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಮತ್ತು ಅವರ ಸಹಚರರನ್ನು ಇ.ಡಿ 2018ರಲ್ಲಿ ಬಂಧಿಸಿದ್ದು, ಡಿಕೆಶಿಯವರು ಅನಾರೋಗ್ಯ ಕಾರಣ ನೀಡಿ ತಾತ್ಕಾಲಿಕ ಜಾಮೀನು ಪಡೆದಿದ್ದರು.
ಇನ್ನು ಜಾಮೀನು ವಿಸ್ತರಣೆ ವಿಚಾರಣೆ ನಡೆಸಿದ ನ್ಯಾಯಾಧೀಶ ವಿಕಾಸ್ ಧುಲ್ ಅವರು ಜುಲೈ 30 ರಂದು ಎರಡೂ ಕಡೆಯ ವಿಚಾರಣೆಯ ನಂತರ ಆದೇಶವನ್ನು ಕಾಯ್ದಿರಿಸಿದ್ದು, ಬಂಧನ ಸಾಧ್ಯತೆ ಇದೆ ಎಂಬ ಚರ್ಚೆ ಪ್ರಾರಂಭವಾಗಿತ್ತು. ಆದರೆ ಶಿವಕುಮಾರ್ ಮತ್ತು ಉದ್ಯಮಿ ಸಚಿನ್ ನಾರಾಯಣ್, ಶರ್ಮಾ ಟ್ರಾನ್ಸ್ಪೋರ್ಟ್ ಮಾಲೀಕ ಸುನೀಲ ಕುಮಾರ್ ಶರ್ಮಾ, ಕರ್ನಾಟಕ ಭವನದ ಉದ್ಯೋಗಿ ಆಂಜನೇಯ ಮತ್ತು ರಾಜೇಂದ್ರ ಸೇರಿದಂತೆ ಇತರ ಆರೋಪಿಗಳ ಮಧ್ಯಂತರ ಜಾಮೀನನ್ನು ಸಾಮಾನ್ಯ ಜಾಮೀನಿಗೆ ಪರಿವರ್ತಿಸಲಾಗಿದೆ.