ನವದೆಹಲಿ, ಆ 02 (DaijiworldNews/DB): ಲೋಕಸಭೆಯಲ್ಲಿ ಟಿಎಂಸಿ ನಾಯಕರೊಬ್ಬರು ಬೆಲೆ ಏರಿಕೆ ವಿರುದ್ದ ಮಾತನಾಡುತ್ತಿದ್ದ ವೇಳೆ ಅವರದೇ ಪಕ್ಷದ ಸಂಸದೆ ಮಹುವಾ ಮೊಯಿತ್ರಾ ತಮ್ಮ ದುಬಾರಿ ಬೆಲೆಯ ಬ್ಯಾಗ್ನ್ನು ಕೆಳಗಿಟ್ಟು ಟ್ರೋಲ್ಗೊಳಗಾಗಿದ್ದಾರೆ.
ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವುದಾಗಿ ವಿಪಕ್ಷಗಳಿಂದ ಲೋಕಸಭೆಯಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ ಟಿಎಂಸಿಯ ಕಾಕೋಲಿ ಘೋಷ್ ದಸ್ತಿದಾರ್ ಬೆಲೆ ಏರಿಕೆ ವಿರುದ್ದ ಮಾತನಾಡುತ್ತಿದ್ದರು. ಅವರ ಪಕ್ಕದಲ್ಲೇ ಕುಳಿತಿದ್ದ ಸಂಸದೆ ಮಹುವಾ ಮೊಯಿತ್ರಾ ಅವರು ಬೆಲೆ ಏರಿಕೆ ವಿರುದ್ದ ಮಾತನಾಡುವಾಗ ತಮ್ಮ ಒಂದೂವರೆ ಲಕ್ಷ ರೂ. ಮೌಲ್ಯದ ಬ್ಯಾಗ್ನ್ನು ಯಾರಾದರೂ ನೋಡಿದರೆ ಸಮಸ್ಯೆಯಾಗಬಹುದು ಎಂದು ಯಾರಿಗೂ ಕಾಣದಂತೆ ನಿಧಾನವಾಗಿ ಕೆಳಗಿಟ್ಟರು. ಆದರೆ ಈ ವೇಳೆ ಅವರು ಬ್ಯಾಗ್ನ್ನು ಕೆಳಗಿಡುತ್ತಿರುವುದನ್ನೇ ಕ್ಯಾಮರಾದಲ್ಲಿ ಫೋಕಸ್ ಮಾಡಲಾಗಿದ್ದು, ಸದ್ಯ ಇದರ ಫೋಟೋ, ವೀಡಿಯೋಗಳು ವೈರಲ್ ಆಗಿವೆ. ಇದಕ್ಕೆ ನೆಟ್ಟಿಗರು ವಿಧವಿಧದ ಕಮೆಂಟ್ ಮಾಡುತ್ತಿದ್ದಾರೆ.
ಇತ್ತೀಚೆಗಷ್ಟೇ ಕಾಳಿ ದೇವಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿ ಸಂಸದೆ ಮಹುವಾ ಮೊಯಿತ್ರಾ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು.