ಬೆಂಗಳೂರು, ಆ 02(DaijiworldNews/MS): ಕರ್ನಾಟಕದಲ್ಲಿ ಸ್ವಾತಂತ್ರೋತ್ಸವಕ್ಕೂ ಮುನ್ನ ಉಗ್ರರಿಂದ ವಿಧ್ವಂಸಕ ತೀವ್ರ ಕೃತ್ಯ ನಡೆಯುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಬೇಕೆಂದು ಕಟ್ಟೆಚ್ಚರವಹಿಸಲು ಕೇಂದ್ರ ಗೃಹ ಇಲಾಖೆ ಸೂಚಿಸಿದೆ.
ಮಂಗಳೂರು , ಉಡುಪಿ, ಕಾರವಾರ , ಭಟ್ಕಳ ಮಡಿಕೇರಿ ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಸೇರಿದಂತೆ ಸೂಕ್ಷ್ಮ ಪ್ರದೇಶದಲ್ಲಿ ಅಲರ್ಟ್ ಆಗಿರುವಂತೆ ತಿಳಿಸಲಾಗಿದೆ.
ಕೇಂದ್ರ ಗುಪ್ತಚರ ವಿಭಾಗವು ರಾಜ್ಯ ಗೃಹ ಇಲಾಖೆಗೆ ಈ ಬಗ್ಗೆ ಸೂಚನೆ ನೀಡಿದ್ದು, ಕೆಲವು ಸಮಾಜಘಾತುಕ ಶಕ್ತಿಗಳು ಸ್ವಾತಂತ್ರ್ಯ ದಿನಾಚರಣೆ ಮುನ್ನ ವಿದ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿವೆ. ಹೀಗಾಗಿ ಶಂಕಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಬೇಕು. ಗುಪ್ತಚರ ವಿಭಾಗ, ಆಂತರಿಕ ಭದ್ರತೆಯನ್ನು ಇನ್ನಷ್ಟು ಚುರುಕುಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಗೃಹ ಇಲಾಖೆಯು ಸೂಚನೆ ಕೊಟ್ಟಿದೆ ಎಂದು ತಿಳಿದುಬಂದಿದೆ.
ವಿಶೇಷವಾಗಿ ಯುಎಎ ಹಾಗೂ ಆಫ್ರಿಕಾ ರಾಷ್ಟ್ರಗಳಿಂದ ಆಗಮಿಸುವ ಪ್ರಜೆಗಳ ಮೇಲೆ ಕಣ್ಣಿಡಬೇಕು. ವಿಮಾನ ನಿಲ್ದಾಣದಲ್ಲಿ ಬರುವ ಪ್ರತಿಯೊಬ್ಬ ಪ್ರಯಾಣಿಕರ ಮಾಹಿತಿಯನ್ನು ಕಲೆ ಹಾಕಬೇಕು. ಅವರು ಯಾವ ಕಾರಣಕ್ಕಾಗಿ ಬಂದಿದ್ದಾರೆ, ಎಲ್ಲಿ ವಾಸ್ತವ್ಯ ಹೂಡಲಿದ್ದಾರೆ, ಕರ್ತವ್ಯ ನಿರ್ವಹಿಸುವ ಸ್ಥಳ ಸೇರಿದಂತೆ ಪ್ರತಿಯೊಂದು ಮಾಹಿತಿ ಕಲೆ ಹಾಕುವಂತೆ ಸೂಚಿಸಿದೆ.
ಕಳೆದ ಭಾನುವಾರ ರಾಷ್ಟ್ರೀಯ ತನಿಖಾ ದಳ ಭಟ್ಕಳ , ತುಮಕೂರಿನಲ್ಲಿ ದಾಳಿ ನಡೆಸಿ ಕೆಲವು ಶಂಕಿತರನ್ನು ವಿಚಾರಣೆಗೆ ಒಳಪಡಿಸಿತ್ತು.