ಕೊಲ್ಕತ್ತಾ, ಆ 02 (DaijiworldNews/DB): ಎಸ್ಎಸ್ಸಿ ಹಗರಣ ಸಂಬಂಧ ಬಂಧಿತರಾಗಿರುವ ಪಶ್ಚಿಮ ಬಂಗಾಳ ಮಾಜಿ ಸಚಿವ ಪಾರ್ಥ ಚಟರ್ಜಿ ಅವರು ಆರೋಗ್ಯ ತಪಾಸಣೆಗೆಂದು ಆಸ್ಪತ್ರೆಗೆ ಆಗಮಿಸಿದ್ದಾಗ ಮಹಿಳೆಯೊಬ್ಬರು ಅವರ ಮೇಲೆ ಚಪ್ಪಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ದಕ್ಷಿಣ 24 ಪರಗಣ ಜಿಲ್ಲೆಯ ಅಮತಾಲಾ ನಿವಾಸಿ ಸುಭ್ರಾ ಘಡುಯಿ ಚಪ್ಪಲಿ ಎಸೆದ ಮಹಿಳೆ. ಚಪ್ಪಲಿ ಎಸೆದ ಬಗ್ಗೆ ಮಹಿಳೆಯನ್ನು ಮಾಧ್ಯಮಗಳ ಪ್ರತಿನಿಧಿಗಳು ಪ್ರಶ್ನಿಸಿದಾಗ, ಅದೆಷ್ಟೋ ಬಡವರ ಹಣವನ್ನು ಆತ ಲಪಟಾಯಿಸಿದ್ದಾನೆ. ಫ್ಲಾಟ್ ಖರೀದಿಸಿದ್ದಾನೆ. ಬಡವರ ಹಣದಲ್ಲಿ ಮೆರೆದಾತನನ್ನು ಹವಾನಿಯಂತ್ರಿತ ವಾಹನದಲ್ಲಿ ಸಾಗಿಸಲಾಗುತ್ತಿದೆ. ಆತನ ಕುತ್ತಿಗೆಯನ್ನು ಹಗ್ಗದಿಂದ ಕಟ್ಟಿ ಎಳೆಯಬೇಕು, ತಲೆಗೆ ಚಪ್ಪಲಿ ಹೊಡೆದರಷ್ಟೇ ನನಗೆ ಸಂತೋಷ ಎಂದಿದ್ದಾರೆ. ಬಿಗಿ ಭದ್ರತೆಯ ನಡುವೆಯೂ ಘಟನೆ ನಡೆದಿದ್ದು, ಬಳಿಕ ಹೆಚ್ಚಿನ ಭದ್ರತೆಯೊಂದಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.
ಎಸ್ಎಸ್ಸಿ ಹಗರಣ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಮಟ್ಟದ ರಾಜಕೀಯ ಸಂಚಲನಕ್ಕೆ ಕಾರಣವಾಗಿದ್ದು, ಪಾರ್ಥ ಚಟರ್ಜಿ ಬಂಧನವಾಗುತ್ತಿದ್ದಂತೆಯೇ ಅವರನ್ನು ಸಿಎಂ ಮಮತಾ ಬ್ಯಾನರ್ಜಿ ಪಕ್ಷದಿಂದ ವಜಾ ಗೊಳಿಸಿದ್ದರು.