ನವದೆಹಲಿ, ಆ 02 (DaijiworldNews/HR): ನ್ಯಾಯಾಧೀಶರಲ್ಲೊಬ್ಬರಿಗೆ ಅಸೌಖ್ಯವಿರುವುದರಿಂದ ಹಿಜಾಬ್ ವಿವಾದ ಕುರಿತಾದ ಪ್ರಕರಣದ ವಿಚಾರಣೆಗೆ ವಿಳಂಬವಾಗಿದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಎನ್.ವಿ.ರಮಣ ಹೇಳಿದ್ದಾರೆ.
ಹಿಜಾಬ್ ಪ್ರಕರಣದ ವಿಚಾರಣೆ ಬಗ್ಗೆ ಇಂದು ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಪ್ರಸ್ತಾಪಿಸಿದ ವೇಳೆ ಉತ್ತರಿಸಿದ ಸಿಜೆಐ, ಈ ಅರ್ಜಿಯ ವಿಚಾರಣೆ ಆರಂಭಿಸಬೇಕಿತ್ತು, ಆದರೆ ವಿಚಾರಣೆ ನಡೆಸಬೇಕಿದ್ದ ನ್ಯಾಯಾಧೀಶರ ಪೈಕಿ ಓರ್ವರಿಗೆ ಆರೋಗ್ಯ ಸಮಸ್ಯೆ ಇರುವುದರಿಂದ ವಿಚಾರಣೆ ವಿಳಂಬವಾಗುತ್ತಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಬಳಿಕ ವಿಶೇಷ ಪೀಠ ರಚನೆ ಮಾಡಲಾಗುವುದು ಎಂದಿದ್ದಾರೆ.
ಇನ್ನು ಅರ್ಜಿಗಳನ್ನು ಮಾರ್ಚ್ ತಿಂಗಳಿನಲ್ಲಿಯೇ ಸಲ್ಲಿಸಲಾಗಿದ್ದು, ಕನಿಷ್ಠ ವಿಚಾರಣೆಗೆ ದಿನಾಂಕ ನಿಗಧಿಯಾದರೂ ಮಾಡಿ ಎಂದು ಮೀನಾಕ್ಷಿ ಅರೋರಾ ಮನವಿ ಮಾಡಿದ್ದು, ವಿಚಾರಣೆಗೆ ಪ್ರಕರಣವನ್ನು ಪಟ್ಟಿ ಮಾಡಲಾಗುವುದು ಎಂದು ಸಿಜೆಐ ತಿಳಿಸಿದ್ದಾರೆ.