ನವದೆಹಲಿ, ಆ 02 (DaijiworldNews/DB): ಸಂಸದರಿಗಾಗಿ 'ತಿರಂಗ ಬೈಕ್ ರ್ಯಾಲಿ' ಬುಧವಾರ ಬೆಳಗ್ಗೆ ನವದೆಹಲಿಯ ಕೆಂಪುಕೋಟೆಯಿಂದ ಸಂಸತ್ತಿನವರೆಗೆ ನಡೆಯುತ್ತಿದ್ದು, ಎಲ್ಲಾ ಪಕ್ಷಗಳ ಸದಸ್ಯರು ಭಾಗವಹಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ ಮಾಡಿದ್ದಾರೆ.
ಬಿಜೆಪಿ ಸಂಸದೀಯ ಪಕ್ಷದ ಸಭೆಯ ನಂತರ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯವು ರ್ಯಾಲಿ ಆಯೋಜಿಸುತ್ತಿದೆ. ಇದು ಬಿಜೆಪಿ ಪಕ್ಷದ ಕಾರ್ಯಕ್ರಮವಲ್ಲ, ಸಂಸ್ಕೃತಿ ಸಚಿವಾಲಯದ ಕಾರ್ಯಕ್ರಮವಾಗಿರುವುದರಿಂದ ಎಲ್ಲಾ ಪಕ್ಷಗಳ ಸಂಸದರು ಭಾಗವಹಿಸಬೇಕು. ಬೆಳಗ್ಗೆ 8.30ಕ್ಕೆ ಹಾಜರಾಗಬೇಕು ಎಂದು ಕೋರಿದರು.
ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಗಸ್ಟ್ 9ರಿಂದ 15ರವರೆಗೆ ಒಂದು ವಾರ ವಿವಿಧ ಕಾರ್ಯಕ್ರಮ ನಡೆಯಲಿದ್ದು, ಎಲ್ಲಾ ಕಾರ್ಯಕ್ರಮಗಳ ಕುರಿತು ಸಂಸದೀಯ ಮಂಡಳಿ ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಪಕ್ಷದ ಮುಖಂಡರಿಗೆ ಮಾಹಿತಿ ನೀಡಿದರು.