ಬೆಂಗಳೂರು, ಆ 02 (DaijiworldNews/HR): ಅಳುವೇ ನಮ್ಮ ಸಹಜ ಧರ್ಮ. ಆದರೆ ನಿಮ್ಮಂತೆ ಇನ್ನೊಬ್ಬರನ್ನು ಅಳಿಸುವ ರಾವಣ ಸಂಸ್ಕೃತಿಯಲ್ಲ. ಬದುಕಿಗೆ ಬೆಂಕಿ ಇಡಲ್ಲ. ಮತ್ತೊಬ್ಬರ ಮಕ್ಕಳ ಸಾವಿನಿಂದ ಉನ್ಮಾದಗೊಂಡು ರಣಕೇಕೆ ಹಾಕುತ್ತಿಲ್ಲ. ಹಿಂಸೆ, ಕಗ್ಗೊಲೆಯೇ ನಿಮ್ಮ ಧರ್ಮ, ಹೌದಲ್ಲವೇ? ಕೊಲೆಗಳನ್ನೇ ಸೋಪಾನ ಮಾಡಿಕೊಂಡು ʼಕಾಶಿ ಕಾರಿಡಾರುʼ ಮಾಡಿ ಮೆರೆದರೆ ಆ ಶಿವ ಮೆಚ್ಚಾನೆಯೇ? ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬಿಜೆಪಿ ವಿಲಕ್ಷಣ, ವಿಕೃತ ಪಕ್ಷ. ಭೀಭತ್ಸ ಬಿಜೆಪಿ. ಅಪರೇಷನ್ ಕಮಲವನ್ನೇ ನೆಚ್ಚಿಕೊಂಡ ವಿನಾಶಕಾರಿ ಪಕ್ಷ. ಕಗ್ಗೊಲೆಗಳೇ ಅದರ ಕಸುಬು, ಬಡ ಯುವಕರ ರಕ್ತವೇ ಅದರ ಪಾಲಿನ ʼಅಧಿಕಾರಾಮೃತʼ. ಅದೆಷ್ಟು ಹೆತ್ತ ಕರುಳುಗಳು ಕಣ್ಣೀರಿಡುತ್ತಿವೆ. ಅದಕ್ಕೆ ಉತ್ತರ ಕೊಡುವ ನೈತಿಕತೆ ಇದೆಯಾ? ಆಮೇಲೆ ನನ್ನ ಕಣ್ಣೀರ ಬಗ್ಗೆ ಮಾತನಾಡಿ ಎಂದರು.
ನಾನು ಇನ್ನೊಬ್ಬರ ಕಣ್ಣೀರಿನ ಬಗ್ಗೆ, ಭಾವೋದ್ವೇಗದ ಕುರಿತು ಲಘುವಾಗಿ ಮಾತನಾಡಲಾರೆ. ಆದರೂ ವಿಕೃತಿ ಬಿಜೆಪಿಗೆ ನೆನಪು ಮಾಡಿಕೊಡಲು ಬಯಸುತ್ತೇನೆ. ಅಧಿಕಾರ ಹೋಗುತ್ತದೆ ಎಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ʼನಲ್ಲಿ ವಿದಾಯ ಭಾಷಣ ಮಾಡುತ್ತಾ ವೇದಿಕೆಯ ಮೇಲೆಯೇ ಕಣ್ಣೀರಧಾರೆ ಹರಿಸಿದವರು ಯಾವ ಪಕ್ಷದವರು? ಎಂದು ಪ್ರಶ್ನಿಸಿದ್ದಾರೆ.
ಪ್ರವಾಹಕ್ಕೆ ತುತ್ತಾಗಿ ಸತ್ತವರ ಬಗ್ಗೆ ಹನಿ ಕಂಬನಿ ಇಲ್ಲ, ಪಾತಕ ರಾಜಕೀಯಕ್ಕೆ ನಡುರಸ್ತೆಗಳಲ್ಲಿ ಕೊಲೆಯಾದ ಯುವಕರ ಬಗ್ಗೆ ಎಳ್ಳಷ್ಟು ಕರುಣೆ ಇಲ್ಲ. ಬಣ್ಣದ ಮಾತು, ಕೃತಕ ಸಾಂತ್ವನ!! ಆದರೂ, ಸಿನಿಮಾದಲ್ಲಿ ನಾಯಿ ಸತ್ತ ದೃಶ್ಯ ನೋಡಿ ಮಾಧ್ಯಮಗಳ ಮುಂದೆ ಗಳಗಳನೇ ಕಣ್ಣೀರಕೋಡಿ ಹರಿಸಿದ ಮಹಾಶಯರು ಯಾವ ಪಕ್ಷದ ಮುಖ್ಯಮಂತ್ರಿಗಳು? ಸ್ವಲ್ಪ ಹೇಳಿ? ಎಂದಿದ್ದಾರೆ.