ಬೆಂಗಳೂರು, ಆ 02 (DaijiworldNews/DB): ಪ್ರವೀಣ್ ಹಾಗೂ ಫಾಝಿಲ್ ಹಂತಕರನ್ನು ಶೀಘ್ರ ಪೊಲೀಸರು ಪತ್ತೆ ಹಚ್ಚಿ ಕಾನೂನು ಕುಣಿಕೆಗೆ ತರಲಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಅವರು, ಎರಡೂ ಘಟನೆಗೆ ಸಂಬಂಧಿಸಿದಂತೆ ಹಂತಕರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇಂದು ಪ್ರವೀಣ್ ಹತ್ಯೆ ಕೃತ್ಯಕ್ಕೆ ಸಹಕರಿಸಿದ ಇನ್ನಿಬ್ಬರ ಬಂಧನವಾಗಿದೆ. ಶೀಘ್ರ ಹಂತಕರ ಬಂಧನವಾಗಲಿದೆ ಎಂದರು.
ವಿನಾಕಾರಣ ಯಾರನ್ನೂ ಬಂಧಿಸಿಲ್ಲ. ಅಮಾನವೀಯ ಕೃತ್ಯ ಎಸಗಿದವರಿಗೆ ಶಿಕ್ಷೆ ನೀಡದೆ ಬಿಡುವುದಿಲ್ಲ. ಇದಕ್ಕಿಂತ ಹೆಚ್ಚು ಈ ಹಂತದಲ್ಲಿ ಏನು ಹೇಳುವುದಿಲ್ಲ ಎಂದು ಅವರು ತಿಳಿಸಿದರು.
ಮಸೂದ್ ಕೊಲೆ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಫಾಝಿಲ್ ಹತ್ಯೆ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಶೀಘ್ರ ಹಂತಕರ ಬಂಧನವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಗೃಹ ಸಚಿವರು ಉತ್ತರಿಸಿದರು.