ನವದೆಹಲಿ, ಆ 02 (DaijiworldNews/DB): ಅತ್ಯಾಚಾರವಾಗಿದೆಯೆಂದು ಸುಳ್ಳು ಪ್ರಕರಣ ದಾಖಲಿಸಿದ ಮಹಿಳೆಯೋರ್ವರಿಗೆ ದೆಹಲಿ ಕೋರ್ಟ್ ಸರಿಯಾದ ಬುದ್ದಿ ಕಲಿಸಿದೆ. ದಿನಕ್ಕೆ ಮೂರು ಗಂಟೆಯಂತೆ ವಾರದಲ್ಲಿ ಐದು ದಿನ ಎರಡು ತಿಂಗಳ ಕಾಲ ಅಂಧ ಮಕ್ಕಳ ಶಾಲೆಯಲ್ಲಿ ಸೇವೆ ಸಲ್ಲಿಸುವುದರೊಂದಿಗೆ 50 ಗಿಡ ನೆಟ್ಟು ಐದು ವರ್ಷ ಆರೈಕೆ ಮಾಡಬೇಕು ಎಂದು ಕೋರ್ಟ್ ಸೂಚಿಸಿದೆ.
ಹಣಕಾಸು ವಿಚಾರಕ್ಕೆ ಸಂಬಂಧಿಸಿ ಸೇಡು ತೀರಿಸಿಕೊಳ್ಳುವ ಸಲುವಾಗಿ ನಾಲ್ಕು ಮಕ್ಕಳ ತಾಯಿಯಾಗಿರುವ ಮಹಿಳೆಯೊಬ್ಬಳು ಹಿಮಾಂಶು ಎಂಬಾತನ ವಿರುದ್ದ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಮನೆಗೆ ಕರೆದು ಕೂಲ್ ಡ್ರಿಂಕ್ಸ್ನಲ್ಲಿ ನಿದ್ದೆ ಮಾತ್ರೆ ಹಾಕಿ ಅತ್ಯಾಚಾರ ಎಸಗಿದ್ದಾನೆಂದು ಆರೋಪಿಸಿ ಮಹಿಳೆ ದೂರು ದಾಖಲಿಸಿದ್ದಳು. ಹೀಗಾಗಿ ಹಿಮಾಂಶು ವಿರುದ್ದ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಆದರೆ ಯಾವುದೇ ತಪ್ಪಿಲ್ಲದಿದ್ದರೂ ನನ್ನ ಮೇಲೆ ವೃಥಾ ಆರೋಪ ಮಾಡಲಾಗಿದೆ ಎಂದು ಹಿಮಾಂಶು ಎಫ್ಐಆರ್ ರದ್ದು ಮಾಡಬೇಕೆಂದು ಕೋರಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವ ವೇಳೆ ತಾನು ಸುಳ್ಳು ಕೇಸು ದಾಖಲಿಸಿರುವುದು ಗೊತ್ತಾಗುತ್ತದೆ ಎಂದು ಅರಿತ ಮಹಿಳೆ ತತ್ಕ್ಷಣ ಹಿಮಾಂಶುವಿನೊಂದಿಗೆ ತಾನು ಒಪ್ಪಂದ ಮಾಡಿಕೊಂಡಿದ್ದು, ದೂರು ಹಿಂತೆಗೆದುಕೊಳ್ಳುತ್ತೇನೆಂದು ಮತ್ತೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಳು. ಅಲ್ಲದೆ, ಹಣಕಾಸಿನ ವ್ಯವಹಾರದಿಂದಾಗಿ ತಾನು ಖಿನ್ನತೆಗೊಳಗಾಗಿದ್ದು, ಈ ಕಾರಣದಿಂದ ಪ್ರಕರಣ ದಾಖಲಿಸಿದ್ದೆ ಎಂದು ಒಪ್ಪಿಕೊಂಡಳು.
ಆದರೆ ಸುಳ್ಳು ಪ್ರಕರಣ ದಾಖಲಿಸಿ ಪುರುಷನಿಗೆ ಮಾನಸಿಕ ಹಿಂಸೆ ನೀಡಿದ್ದ ಮಹಿಳೆ ವಿರುದ್ದ ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮಹಿಳೆ ನಡವಳಿಕೆ ಅನುಚಿತವಾಗಿದ್ದು, ಇಂತದ್ದಕ್ಕೆಲ್ಲ ಕಡಿವಾಣ ಅಗತ್ಯವಿದೆ ಎಂದು ಅಭಿಪ್ರಾಯಿಸಿ ಆಕೆಗೆ ಶಿಕ್ಷೆ ನೀಡಿದ್ದಾರೆ.
ಅದರಂತೆ ದಿನಕ್ಕೆ ಮೂರು ಗಂಟೆಯಂತೆ ವಾರದಲ್ಲಿ ಐದು ದಿನ ಎರಡು ತಿಂಗಳ ಕಾಲ ಅಂಧ ಮಕ್ಕಳ ಶಾಲೆಯಲ್ಲಿ ಸೇವೆ ಸಲ್ಲಿಸಬೇಕು. ಅಲ್ಲದೆ, 50 ಗಿಡ ನೆಟ್ಟು ಐದು ವರ್ಷ ಆರೈಕೆ ಮಾಡಬೇಕು ಎಂದು ಕೋರ್ಟ್ ಸೂಚಿಸಿದೆ.