ಕುಣಿಗಲ್, ಆ 02 (DaijiworldNews/DB): ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಬೆಂಗಾವಲು ವಾಹನ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಐವರು ಪೊಲೀಸರು ಗಾಯಗೊಂಡ ಘಟನೆ ಕುಣಿಗಲ್ ತಾಲೂಕಿನ ಎಡಿಯೂರು ಹೋಬಳಿ ರಾಷ್ಟ್ರೀಯ ಹೆದ್ದಾರಿ 75 ತಿಪ್ಪೂರು ಗೇಟ್ ಬಳಿ ನಡೆದಿದೆ.
ಸಿಬ್ಬಂದಿಗಳಾದ ಮಹೇಶ್, ಮಂಜುನಾಥ್ ಅವರಿಗೆ ತೀವ್ರ ಪ್ರಮಾಣದ ಗಾಯಗಳಾಗಿದ್ದು, ಜಗದೀಶ್, ಆನಂದ್, ಹರೀಶ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಎ.ಚ್.ಡಿ. ಕುಮಾರಸ್ವಾಮಿ ಅವರು ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬೆಳ್ಳಾರೆಯ ಪ್ರವೀಣ್ ನೆಟ್ಟಾರು, ಮಸೂದ್ ಮತ್ತು ಸುರತ್ಕಲ್ನ ಪಾಝಿಲ್ ನಿವಾಸಕ್ಕೆ ಭೇಟಿ ನೀಡಿ ಬೆಂಗಳೂರಿಗೆ ಹೆಲಿಕಾಪ್ಟರ್ ಮೂಲಕ ತೆರಳಿದ್ದರು. ಇದೇ ವೇಳೆ ಅವರ ಬೆಂಗಾವಲು ಪೊಲೀಸರು ತಮ್ಮ ಕರ್ತವ್ಯ ಮುಗಿಸಿ ರಸ್ತೆ ಮಾರ್ಗವಾಗಿ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದರು. ಈ ವೇಳೆ ತಿಪ್ಪೂರು ಗೇಟ್ ಬಳಿ ಕಾರು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದೆ.
ಗಾಯಗೊಂಡ ಸಿಬಂದಿಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ. ಅಮೃತೂರು ವೃತ್ತ ನಿರೀಕ್ಷಕ ಅರುಣ್ ಸಾಲಂಕೆ, ಪಿಎಸ್ಐ ಮಂಗಳಗೌರಮ್ಮ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಸಿಬಂದಿಗಳ ಆರೋಗ್ಯ ವಿಚಾರಿಸಿದರು. ಅಮೃತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.