ನವದೆಹಲಿ, ಆ 01(DaijiworldNews/SM): ಭಾರತದಲ್ಲಿ ಯಾವುದೇ ಕಾರಣಕ್ಕೂ ಆರ್ಥಿಕ ಹಿಂಜರಿತ ಅಥವಾ ಬಿಕ್ಕಟ್ಟು ಉಂಟಾಗುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಸಂಸದರು ಕಲಾಪ ಬಹಿಷ್ಕರಿಸಿ ಹೊರನಡೆಯುವ ನಡುವೆ, ಲೋಕಸಭೆಯಲ್ಲಿ ಬೆಲೆ ಏರಿಕೆ ವಿಷಯದ ಚರ್ಚೆವೇಳೆ ಕಾಂಗ್ರೆಸ್ನ ಅಧೀರ್ ರಂಜನ್ ಚೌಧರಿ ಪ್ರಶ್ನೆಗೆ ಉತ್ತರಿಸಿದ ಸಚಿವೆ ನಿರ್ಮಲಾ ಸೀತಾರಾಮನ್, "ಭಾರತದ ಆರ್ಥಿಕತೆಯು ಸ್ಥಗಿತಗೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಲು ಬಯಸುತ್ತೇನೆ. ಅಮೆರಿಕದಲ್ಲಿ ಅದನ್ನು ತಾಂತ್ರಿಕ ಹಿಂಜರಿತ ಎಂದು ಕರೆಯಲಾಗುತ್ತದೆ. ಭಾರತವು ಆರ್ಥಿಕ ಹಿಂಜರಿತಕ್ಕೆ ಜಾರುವ ಸಂಭವನೀಯತೆ ಶೂನ್ಯವಾಗಿದೆ" ಎಂದು ಉತ್ತರ ನೀಡಿದರು.
ಆದರೆ, ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ನಾಯಕರು ಬೆಲೆ ಏರಿಕೆ ಬಗ್ಗೆ ಭಾರಿ ಪ್ರತಿಭಟನೆ ನಡೆಸಿದರು. ಆಹಾರ ವಸ್ತುಗಳ ಮೇಲೆ ಜಿಎಸ್ಟಿ, ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರ ಕೈಗೊಂಡ ಕ್ರಮಗಳ ನಂತರ ಆಹಾರ ಧಾನ್ಯಗಳು, ಅಡುಗೆ ಎಣ್ಣೆ ಬೆಲೆಗಳನ್ನು ಕಡಿಮೆ ಮಾಡಲಾಗಿದೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದರು.
ಸಾಂಕ್ರಾಮಿಕದ ವೇಳೆಯೂ ಉತ್ತಮ ನಿರ್ವಹಣೆ ನಿರ್ಮಲಾ ಸೀತಾರಾಮನ್ ಅವರು "ಆರ್ಥಿಕತೆಯ ಮೇಲೆ ಕೋವಿಡ್ ಹೊಡೆತದ ಹೊರತಾಗಿಯೂ, ನಾವು ಹಣದುಬ್ಬರ ದರವನ್ನು ಶೇಕಡಾ 7 ಅಥವಾ ಅದಕ್ಕಿಂತ ಕಡಿಮೆ ಮಟ್ಟದಲ್ಲಿ ನಿರ್ವಹಿಸಿದ್ದೇವೆ" ಎಂದು ಹೇಳಿದರು, ಭಾರತೀಯ ಆರ್ಥಿಕತೆಯು ಉತ್ತಮವಾಗಿ ಚೇತರಿಸಿಕೊಂಡಿದೆ ಎಂದು ಹೇಳಿದರು. "ಸಾಂಕ್ರಾಮಿಕ, ಕೊರೊನಾ ಎರಡನೇ ಅಲೆ, ಓಮೈಕ್ರಾನ್, ರಷ್ಯಾ-ಉಕ್ರೇನ್ ಯುದ್ಧ, ಇಂದಿಗೂ ಚೀನಾದಲ್ಲಿ ಅತಿದೊಡ್ಡ ಪೂರೈಕೆ ಘಟಕಗಳು ಲಾಕ್ಡೌನ್ ತೆರವು ಮಾಡಿಲ್ಲ ಎಂದ ಅವರು. ಅದರ ಹೊರತಾಗಿಯೂ, ನಾವು ಹಣದುಬ್ಬರವನ್ನು ಶೇಕಡ 7 ಅಥವಾ ಅದಕ್ಕಿಂತ ಕಡಿಮೆ ಒಳಗೆ ನಿರ್ವಹಿಸಿದ್ದೇವೆ," ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು