ಬೆಂಗಳೂರು, ಆ 01(DaijiworldNews/SM): ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ವಿಚಾರಣೆಗೆ ಸಂಬಂಧಿಸಿದಂತೆ ಹೈಕೋರ್ಟ್, ಸಿಬಿಐಗೆ ನೋಟಿಸ್ ಜಾರಿಗೊಳಿಸಿದೆ.
ಸಿಬಿಐ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದು ಕೋರಿ ಡಿಕೆಶಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆಯನ್ನು ನ್ಯಾಯಪೀಠ ಕೈಗೆತ್ತಿಕೊಂಡಿದೆ. ಈ ನಡುವೆ ಹೈಕೋರ್ಟ್ ಸಿಬಿಐಗೆ ನೋಟಿಸ್ ಜಾರಿಗೊಳಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಡಿಕೆಶಿ ಪರ ವಾದಿಸಿದ ವಕೀಲರು, ಆರೋಪದ ಕುರಿತು ಎಫ್ಐಆರ್ ನಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಅಲ್ಲದೆ, ಇಡೀ ಕುಟುಂಬದ ಆದಾಯವನ್ನು ಆದಾಯ ತೆರಿಗೆ ಇಲಾಖೆ ಗಣನೆಗೆ ತೆಗೆದುಕೊಂಡಿದೆ. ನಿಯಮದ ಅನುಸಾರ ಅವರ ಇಡೀ ಕುಟುಂಬದ ಆದಾಯ ಪರಿಗಣಿಸುವಂತಿಲ್ಲ. ಕೇವಲ ಡಿ.ಕೆ.ಶಿವಕುಮಾರ್ ಅವರ ಆದಾಯವನ್ನು ಮಾತ್ರ ಪರಿಗಣಿಸಬೇಕಿತ್ತು. ಹಾಗೆ ಮಾಡದೆ ನಿಯಮ ಉಲ್ಲಂಘಿಸಿರುವುದರಿಂದ ಪ್ರಕರಣ ರದ್ದುಗೊಳಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.