ಬೆಂಗಳೂರು, ಆ 01(DaijiworldNews/MS): ಸಿಇಟಿ ಪರೀಕ್ಷೆ ಫಲಿತಾಂಶದ ಬೆನ್ನಲ್ಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವಿರುದ್ಧ ವಿದ್ಯಾರ್ಥಿಗಳು ಹಾಗೂ ಪೋಷಕರ ಆಕ್ರೋಶ ಭುಗಿಲೆದ್ದಿದೆ. ಸಿಇಟಿ ಅಂಕದ ಜತೆ ಪಿಯುಸಿ ಅಂಕಗಳನ್ನು ಸರಿಯಾದ ಕ್ರಮದಲ್ಲಿ ಸೇರಿಸದೇ ಅನ್ಯಾಯ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿ ಮುಂದೆ ಜಮಾಯಿಸಿದ್ದ ನೂರಾರು ವಿದ್ಯಾರ್ಥಿಗಳು ಮತ್ತು ಪೋಷಕರು ಸರಕಾರ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಉನ್ನತ ಶಿಕ್ಷಣ ಸಚಿವರ ವಿರುದ್ಧ ಘೋಷಣೆ ಹಾಕಿ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿ ಕೋವಿಡ್ ನಿಂದಾಗಿ ಪಿಯು ಪರೀಕ್ಷೆ ರದ್ದಾಗಿತ್ತು. ಆಗ ಕೇವಲ ಸಿಇಟಿ ಅಂಕ ಮಾತ್ರ ಪರಿಗಣಿಸಲಾಗಿತ್ತು. ಈ ವರ್ಷ ಸಿಇಟಿ ಜತೆ ಪಿಯು ಅಂಕಗಳನ್ನು ಪರಿಗಣನೆಗೆ ತೆಗೆದುಕೊಂಡಿದ್ದಾರೆ. ರಿಪೀಟರ್ಸ್ ಆದ ನಮಗೂ ಸಿಇಟಿ ಹಾಗೂ ಪಿಯು ಅಂಕ ಪರಿಗಣಿಸುವಂತೆ ಕೆಇಎಗೆ ಒತ್ತಾಯಿಸಿದ್ದಾರೆ.