ಭೋಪಾಲ್, ಆ 01 (DaijiworldNews/HR): ಶಾಹದೋಲ್ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯು ಆಂಬುಲೆನ್ಸ್ ಒದಗಿಸದ ಕಾರಣ ವ್ಯಕ್ತಿಯೊಬ್ಬರು ತನ್ನ ಮೃತ ತಾಯಿಯ ಶವವನ್ನು ಬೈಕ್ ನಲ್ಲಿ ಕಟ್ಟಿ 80 ಕಿಮೀ ದೂರದಲ್ಲಿರುವ ತನ್ನ ಹಳ್ಳಿಗೆ ತೆಗೆದುಕೊಂಡು ಹೋಗಿರುವ ಘಟನೆ ನಡೆದಿದೆ.
ತಮ್ಮ ತಾಯಿಯ ಚಿಕಿತ್ಸೆಗಾಗಿ ಅನುಪ್ಪುರ್ ಜಿಲ್ಲೆಯಿಂದ ಶಾಹದೋಲ್ ವೈದ್ಯಕೀಯ ಕಾಲೇಜಿಗೆ ಕರೆ ತಂದಿದ್ದು, ಚಿಕಿತ್ಸೆ ಫಲಕಾರಿಯಾಗದೇ ತಾಯಿ ಸಾವನ್ನಪ್ಪಿದ್ದಾರೆ. ಅವರ ದೇಹವನ್ನು ಸಾಗಿಸಲು ಆಸ್ಪತ್ರೆಯು ವಾಹನವನ್ನು ಕೂಡ ಒದಗಿಸಲಿಲ್ಲ. ಖಾಸಗಿ ವಾಹನದವರು 5,000 ಹಣ ಕೇಳಿದ ಕಾರಣ, 100 ಕ್ಕೆ ಮರದ ಚಪ್ಪಡಿ ಖರೀದಿಸಿ ಅದಕ್ಕೆ ತಾಯಿಯ ಶವವನ್ನು ಕಟ್ಟಿಕೊಂಡು 80 ಕಿ.ಮೀ ಸವಾರಿ ಮಾಡಿದ್ದಾರೆ.
ಅನುಪ್ಪೂರಿನ ಗೋಡಾರು ಗ್ರಾಮದ ನಿವಾಸಿ ಜೈಮಂತ್ರಿ ಯಾದವ್ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆಕೆಯ ಸ್ಥಿತಿ ಹದಗೆಟ್ಟಿದ್ದರಿಂದ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟಿದ್ದಾಳೆ. ರೋಗಿಯ ಮಗ ಸುಂದರ್ ಯಾದವ್, ಜಿಲ್ಲಾ ಆಸ್ಪತ್ರೆಯ ನರ್ಸ್ಗಳ ನಿರ್ಲಕ್ಷ್ಯದ ಚಿಕಿತ್ಸೆಯಿಂದ ತಾಯಿ ಮೃತಪಟ್ಟಿರುವುದಾಗಿ ಆರೋಪಿಸಿದ್ದಾರೆ.
ಇನ್ನು ಮಹಿಳೆಯ ಮೃತದೇಹವನ್ನು ಗ್ರಾಮಕ್ಕೆ ಸಾಗಿಸಲು ವಾಹನದ ಬೇಡಿಕೆಯಿಟ್ಟೆವು ಆದರೆ ಆಸ್ಪತ್ರೆ ಅದನ್ನು ನಿರಾಕರಿಸಿದ್ದು, ನಮ್ಮಿಂದ ಖಾಸಗಿ ವಾಹನದಲ್ಲಿ ಹೋಗುವಷ್ಟು ಹಣ ಇರಲಿಲ್ಲ ಹಾಗಾಗಿ ಬೈಕ್ ನಲ್ಲಿಯೇ ಶವವನ್ನು ತೆಗೆದುಕೊಂಡು ಹೋಗಿದ್ದೇವೆ ಎಂದು ಹೇಳಿದ್ದಾರೆ.