ಮುಂಬೈ, ಆ 01 (DaijiworldNews/HR): ಭೂ ಹಗರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ಸಂಸದ ಸಂಜಯ್ ರಾವತ್ರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು 9 ಗಂಟೆಗಳ ಕಾಲ ವಿಚಾರಣೆ ನಡೆಸಿ ಬಂಧಿಸಿದ್ದು, ಸಂಜಯ್ ರಾವತ್ ಬಂಧನ ಖಂಡಿಸಿ ಶಿವಸೇನೆ ಸೋಮವಾರ ಮುಂಬೈನಾದ್ಯಂತ ಭಾರಿ ಪ್ರತಿಭಟನೆ ನಡೆಸುತ್ತಿದೆ.
ಈ ಕುರಿತು ಮಾತನಾಡಿದ ಸಂಜಯ್ ಸಹೋದರ ಸುನಿಲ್ ರಾವುತ್, ಸಂಜಯ್ ಬಂಧನಕ್ಕೆ ಸಂಬಂಧಿಸಿದಂತೆ ನಮಗೆ ಯಾವುದೇ ದಾಖಲೆಗಳನ್ನು ನೀಡದೇ ಅವರನ್ನು ಬಂಧಿಸಲಾಗಿದೆ. ಅವರನ್ನು ಬೆಳಿಗ್ಗೆ 11.30 ಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದರು.
ಇನ್ನು ಸಂಜಯ್ ಬಂಧನವನ್ನು ವಿರೋಧಿಸಿ ಶಿವಸೇನೆ ಮುಂಬೈನಾದ್ಯಂತ ಪ್ರತಿಭಟನೆಗಳನ್ನು ಯೋಜಿಸಿದ್ದು, ಭಾನುವಾರ ಕೂಡ ಇಡಿ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಶಿವಸೇನೆಯ 7 ಕಾರ್ಯಕರ್ತರು ರಾವತ್ ಮನೆ ಮುಂದೆ ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ಬಿಜೆಪಿ ಮತ್ತು ಇಡಿ ವಿರುದ್ಧ ಘೋಷಣೆ ಕೂಗಿದ್ದರು.