ಕೋಲ್ಕತಾ, ಜು 31 (DaijiworldNews/DB): ಭಾರೀ ಮೊತ್ತದ ಹಣವನ್ನು ಕಾರಿನಲ್ಲಿ ಸಾಗಿಸಿ ಪಶ್ಚಿಮ ಬಂಗಾಳದ ಹೌರಾದಲ್ಲಿ ಸಿಕ್ಕಿ ಬಿದ್ದ ಜಾರ್ಖಂಡ್ನ ಮೂವರು ಶಾಸಕರನ್ನು ಕಾಂಗ್ರೆಸ್ ಅಮಾನತುಗೊಳಿಸಿದೆ.
ಇರ್ಫಾನ್ ಅನ್ಸಾರಿ, ರಾಜೇಶ್ ಕಚ್ಚಪ್ ಮತ್ತು ನಮನ್ ಬಿಕ್ಸಲ್ ಕೊಂಗಾರಿ ಅಮಾನತಾದ ಶಾಸಕರು. ಶಾಸಕರು ಪ್ರಯಾಣಿಸುತ್ತಿದ್ದ ಎಸ್ಯುವಿ ಕಾರನ್ನು ಪಂಚಲಾ ಪೊಲೀಸ್ ಠಾಣಾ ವ್ಯಾಪ್ತಿಯ ರಾನಿಹಟಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ-16 ರಲ್ಲಿ ಪೊಲೀಸರು ತಡೆದು ಪರಿಶೀಲಿಸಿದಾಗ ಕಾರಿನೊಳಗೆ 48 ಲಕ್ಷ ರೂಪಾಯಿ ಪತ್ತೆಯಾಗಿತ್ತು.
ಸುದ್ದಿ ಹರಡಿದ ಬೆನ್ನಲ್ಲೇ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಾರ್ಖಂಡ್ ಉಸ್ತುವಾರಿ ಅವಿನಾಶ್ ಪಾಂಡೆ, ತತ್ಕ್ಷಣದಿಂದಲೇ ಜಾರಿಗೆ ಬರುವಂತೆ ಮೂವರು ಶಾಸಕರನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅಮಾನತುಗೊಳಿಸಿದ್ದಾರೆ ಎಂದು ತಿಳಿಸಿದರು.
ಮೂವರೂ ರಾಜ್ಯ ಸರ್ಕಾರವನ್ನು ಉರುಳಿಸಲು ಪಿತೂರಿ ಹೂಡಿದ್ದರು. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಕಾರಣಕ್ಕಾಗಿ ಮೂವರನ್ನೂ ಅಮಾನತು ಮಾಡಲಾಗಿದೆ ಎಂದರು. ಅಲ್ಲದೆ, ಇದು ಬಿಜೆಪಿಯ ಆಪರೇಷನ್ ಕಮಲದ ಕುತಂತ್ರ. ಘಟನೆ ಹಿಂದೆ ಬಿಜೆಪಿ ಇದೆ. ಬಿಜೆಪಿಯೇತರ ರಾಜ್ಯಗಳ ಸರ್ಕಾರಗಳನ್ನು ಅಸ್ಥಿರಗೊಳಿಸುವ ಭಾಗವಾಗಿ ಬಿಜೆಪಿ ಇಂತಹ ಕುತಂತ್ರಗಳನ್ನು ಮಾಡುತ್ತಿದೆ ಎಂದು ಜಾರ್ಖಂಡ್ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಅಧ್ಯಕ್ಷ ರಾಜೇಶ್ ಠಾಕೂರ್ ದೂರಿದ್ದಾರೆ.
ಆದರೆ ಪೊಲೀಸ್ ವಶದಲ್ಲಿದ್ದ ಮೂವರು ಶಾಸಕರು ಪಶ್ಚಿಮ ಬಂಗಾಳದಲ್ಲಿ ವಾಹನ ಖರೀದಿಗಾಗಿ ಹಣವನ್ನು ಕೊಂಡೊಯ್ಯಲಾಗಿತ್ತು ಎಂದಿದ್ದು, ಈ ಹಿನ್ನೆಲೆಯಲ್ಲಿ ಮೂವರನ್ನೂ ಬಿಡುಗಡೆ ಮಾಡಲಾಗಿದೆ ಎನ್ನಲಾಗಿದೆ. ಆದರೆ ವಾಹನ ಖರೀದಿ ಉದ್ದೇಶಕ್ಕೋ ಅಥವಾ ಬೇರೆ ಏನಾದರೂ ಉದ್ದೇಶದಿಂದ ಹಣ ಸಾಗಿಸುತ್ತಿದ್ದರೇ ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ.