ಕೋಲ್ಕತ್ತಾ, ಜು 31 (DaijiworldNews/DB): ಜಾರಿ ನಿರ್ದೇಶನಾಲಯದ ದಾಳಿ ವೇಳೆ ಸಿಕ್ಕಿರುವ ನಗದು ನನಗೆ ಸೇರಿದ್ದಲ್ಲ ಎಂದು ಬಹುಕೋಟಿ ಶಾಲಾ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಧಿತನಾಗಿರುವ ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಹೇಳಿದ್ದಾರೆ.
ವೈದ್ಯಕೀಯ ತಪಾಸಣೆಗಾಗಿ ಕೋಲ್ಕತ್ತಾದ ಜೋಕಾದಲ್ಲಿರುವ ಇಎಸ್ಐ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸುದ್ದಿಗಾರರ ಪ್ರಶ್ನೆಗೆ ಭಾನುವಾರ ಉತ್ತರಿಸಿದ ಅವರು, ನನ್ನ ಮೇಲೆ ವ್ಯವಸ್ಥಿತ ಪಿತೂರಿ ನಡೆದಿದೆ. ಆ ಪಿತೂರಿಗೆ ನಾನು ಬಲಿಪಶು. ಇದಕ್ಕೆ ಕಾರಣ ಯಾರು ಎಂಬುದಕ್ಕೆ ಕಾಲವೇ ಉತ್ತರ ನೀಡಲಿದೆ ಎಂದರು.
ನನ್ನನ್ನು ಟಿಎಂಸಿಯಿಂದ ಅಮಾನತುಗೊಳಿಸಿರುವುದಕ್ಕೆ ಅಸಮಾಧಾನವಿದೆ. ಇದರಿಂದ ನಿಷ್ಪಕ್ಷಪಾತ ತನಿಖೆ ಮೇಲೆಯೂ ಪರಿಣಾಮ ಉಂಟಾಗಬಹುದು. ಆದರೆ ಸಚಿವ ಸ್ಥಾನದಿಂದ ವಜಾ ಮಾಡಿದ ಮಮತಾ ಬ್ಯಾನರ್ಜಿಯವರ ನಿರ್ಧಾರವನ್ನು ತಪ್ಪೆನ್ನಲ್ಲಾರೆ ಎಂದು ತಿಳಿಸಿದರು.
ಈ ನಡುವೆ, ಪಾರ್ಥ ಅವರು ಈ ಹಗರಣದಲ್ಲಿ ತಮ್ಮ ತಪ್ಪಿಲ್ಲವೆಂದಾದಲ್ಲಿ ಕೋರ್ಟ್ಗೆ ಹೋಗದೇ ಮೌನವಾಗಿರುವುದೇಕೆ? ನ್ಯಾಯಾಲಯದಲ್ಲಿ ಹೋರಾಡುವ ಹಕ್ಕು ಅವರಿಗಿದೆ ಎಂದು ಟಿಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ಹೇಳಿದ್ದಾರೆ.