ನವದೆಹಲಿ, ಜು 31 (DaijiworldNews/DB): ’ಆಜಾದಿ ಕಾ ಅಮೃತ್ ಮಹೋತ್ಸವ್' ಕಾರ್ಯಕ್ರಮವು ದೊಡ್ಡ ಮಟ್ಟದ ಜನಾಂದೋಲನವಾಗಿ ರೂಪು ತಳೆಯುತ್ತಿದೆ. ದೇಶವಾಸಿಗಳು ಆಗಸ್ಟ್ 2 ಮತ್ತು 15 ರ ನಡುವೆ ತಿರಂಗಾವನ್ನು ತಮ್ಮ ಸಾಮಾಜಿಕ ತಾಣ ಖಾತೆಗಳ ಪ್ರೊಫೈಲ್ ಪಿಕ್ಚರ್ ಆಗಿ ಬದಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕೋರಿದ್ದಾರೆ.
ಜುಲೈ 31ರ ಭಾನುವಾರ ತಮ್ಮ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸುವರ್ಣ ಸಮಯದಲ್ಲಿ ಆಗಸ್ಟ್ 13 ರಿಂದ 15 ರವರೆಗೆ ನಡೆಯುವ 'ಹರ್ ಘರ್ ತಿರಂಗಾ' ಎಂಬ ವಿಶೇಷ ಆಂದೋಲನದಲ್ಲಿ ಮನೆಮನೆಗಳಲ್ಲಿ ರಾಷ್ಟ್ರಧ್ವಜ ರಾರಾಜಿಸಲಿ ಎಂದು ಆಶಿಸಿದರು.
ಮುಂದಿನ ಎರಡೂವರೆ ದಶಕಗಳು ಹೇಗಿರಬೇಕೆಂಬ ಬಗ್ಗೆ ಚಿಂತಿಸೋಣ. ನಿಮ್ಮ ಮನೆಗಳಲ್ಲಿ ಈ ಸಂಭ್ರಮವನ್ನು ಹೇಗೆ ಆಚರಿಸಿದಿರಿ ಎಂಬುದನ್ನು ನನ್ನೊಂದಿಗೆ ಹಂಚಿಕೊಳ್ಳಿ ಎಂದು ಇದೇ ವೇಳೆ ಅವರು ವಿನಂತಿಸಿದರು.
ಕೆಲ ರೈಲು ನಿಲ್ದಾಣಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿ ಅಳವಡಿಸಲಾಗಿದೆ. ಅದನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಓದಿ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಬೇಕು. ಆಜಾದಿ ಕಾ ಅಮೃತ್ ಮಹೋತ್ಸವ್ ಸಂದರ್ಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ‘ಅಮೃತ ಭಾರತಿಗೆ ಕನ್ನಡದ ಆರತಿ’ ಸರಣಿ ಪುಸ್ತಕ ಪ್ರಕಟಿಸಿರುವುದು ಶ್ಗಾಘನೀಯ ಎಂದರು.
ದೇಶದ ಕ್ರೀಡಾಪಟುಗಳು ಹಲವು ಪ್ರಮುಖ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಹಲವು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರಿಗೆ ಇಡೀ ದೇಶದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದ ಪ್ರಧಾನಿ ಮೋದಿ, ಫಿಫಾ ಮಹಿಳಾ ಫುಟ್ಬಾಲ್ ವರ್ಲ್ಡ್ಕಪ್ನಲ್ಲಿಯೂ ಭಾರತ ಪಾಲ್ಗೊಳ್ಳಲಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಶುಮ್ಮಿ ಟಾಯ್ಸ್ ಹೆಸರಿನ ಸ್ಟಾರ್ಟ್ ಅಪ್ ಸಂಸ್ಥೆಯೊಂದು ಪರಿಸರಸ್ನೇಹಿ ಗೊಂಬೆಗಳನ್ನು ತಯಾರಿಸುವಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಮಕ್ಕಳಿಗೆ ಇಷ್ಟವಾಗುವ ಮನರಂಜನೀಯ ಗೊಂಬೆಗಳು, ಶಿಕ್ಷಣಾಧಾರಿತ ಗೊಂಬೆಗಳು ಅಲ್ಲಿವೆ. ಭಾರತೀಯ ಉತ್ಪಾದಕರಿಂದಲೇ ಗೊಂಬೆ, ಫಜಲ್ಸ್ ಗೇಮ್ ಗಳನ್ನು ಖರೀದಿಸಿ ಅವರಿಗೆ ಪ್ರೋತ್ಸಾಹಿಸಬೇಕಾಗಿ ನಾನು ಪೋಷಕರಲ್ಲಿ ಮನವಿ ಮಾಡುತ್ತೇನೆ ಎಂದರು.
ಗೊಂಬೆ ಉದ್ಯಮದಲ್ಲಿ ಬೆಳೆಯಲು ಭಾರತದಲ್ಲಿ ಪೂರಕ ವಾತಾವರಣವಿದೆ. ವೋಕಲ್ ಫಾರ್ ಲೋಕಲ್ ಆಶಯವನ್ನು ಇದರಲ್ಲಿ ಯಶಸ್ವಿಯಾಗಿಸಬಹುದು. ಈ ಹಿಂದೆ ವಿದೇಶಗಳಿಂದ 3000 ಕೋಟಿ ರೂ. ಮೌಲ್ಯದ ಬೊಂಬೆಗಳನ್ನು ನಾವು ಆಮದು ಮಾಡಿಕೊಳ್ಳುತ್ತಿದ್ದರೆ, ಈಗ 2,600 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಗೊಂಬೆಗಳನ್ನು ನಾವೇ ವಿದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ಇದು ನಮ್ಮ ಸಾಧನೆ ಎಂದು ಪ್ರಧಾನಿ ಶ್ಲಾಘಿಸಿದರು.
ಭಾರತದ ಇತಿಹಾಸ, ಪುರಾಣ ಕಥೆಗಳನ್ನು ಆಧರಿಸಿದ ಗೊಂಬೆಗಳನ್ನು ಭಾರತೀಯ ಉತ್ಪಾದಕರು ತಯಾರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದವರು ತಿಳಿಸಿದರು.