ಮುಂಬೈ, ಜು 31 (DaijiworldNews/DB): ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಿವಸೇನಾ ಸಂಸದ ಸಂಜಯ್ ರಾವುತ್ ಅವರ ಮನೆಯಲ್ಲಿ ಶೋಧ ಕಾರ್ಯ ನಡೆಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮೂಲಕ ಸಂಜಯ್ ರಾವುತ್ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಯಾವುದೇ ತಪ್ಪು ಮಾಡದಿದ್ದರೂ, ರಾಜಕೀಯ ದ್ವೇಷದಿಂದ ನನ್ನನ್ನು ಗುರಿಯಾಗಿಸಿಕೊಂಡು ಜಾರಿ ನಿರ್ದೇಶನಾಲಯದ ಮೂಲಕ ನನ್ನ ಮನೆಯಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಈ ತನಿಖೆಯು ಸುಳ್ಳು ಸಾಕ್ಷ್ಯವನ್ನು ಆಧರಿಸಿದೆ ಎಂದು ರಾವುತ್ ಕಿಡಿ ಕಾರಿದ್ದಾರೆ.
ಪತ್ರಾ ಚಾಲ್ ಭೂ ಹಗರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಶಿವಸೇನಾ ಮುಖ್ಯಸ್ಥ ಬಾಳಾ ಸಾಹೇಬ್ ಠಾಕ್ರೆ ಅವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ಶಿವಸೇನೆಗಾಗಿ ನನ್ನ ಹೋರಾಟ ಮುಂದುವರಿಯಲಿದೆ. ಸತ್ತರೂ ನಾನು ಶಿವಸೇನಾ ಬಿಡಲಾರೆ. ಇಡಿಗೂ ಶರಣಾಗಲಾರೆ. ಜೈ ಮಹಾರಾಷ್ಟ್ರ ಎಂದು ಬರೆದುಕೊಂಡಿದ್ದಾರೆ.
ತಪ್ಪೆಸಗದಿದ್ದರೆ ಇಡಿ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿರುವುದು ಏಕೆ? ಸುದ್ದಿಗೋಷ್ಠಿ ನಡೆಸಲು ಸಮಯವಿರುವ ನಿಮಗೆ ವಿಚಾರಣೆಗೆ ಹಾಜರಾಗಲು ಸಮಯವಿಲ್ಲವೇ? ಜಾರಿ ನಿರ್ದೇಶನಾಲಯದ ಬಗ್ಗೆ ಆತಂಕ ಯಾಕೆ ಎಂಬುದಾಗಿ ಇದೇ ವೇಳೆ ಬಿಜೆಪಿ ಶಾಸಕ ರಾಮ್ ಕದಂ ರಾವುತ್ ಅವರನ್ನು ಪ್ರಶ್ನಿಸಿದ್ದಾರೆ.
ರಾವುತ್, ಅವರ ಪತ್ನಿ ಹಾಗೂ ಸ್ನೇಹಿತ ಶಾಮೀಲಾಗಿದ್ದಾರೆ ಎನ್ನಲಾದ 'ಪತ್ರಾ ಚಾಲ್' ಭೂ ಹಗರಣಕ್ಕೆ ಸಂಬಂಧಿಸಿದ ಹಣಕಾಸು ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜುಲೈ 20 ಮತ್ತು 27 ರಂದು ಎರಡು ಬಾರಿ ರಾವುತ್ ಅವರಿಗೆ ಸಮನ್ಸ್ ನೀಡಲಾಗಿತ್ತು. ಆದರೆ ಇಡಿ ಸೂಚಿಸಿದ ದಿನದಂದು ಹಾಜರಾಗಲು ಸಾಧ್ಯವಿಲ್ಲ ಎಂಬುದಾಗಿ ರಾವುತ್ ಪರ ವಕೀಲ ಇಡಿಗೆ ಲಿಖಿತವಾಗಿ ತಿಳಿಸಿದ್ದರು. ಆಗಸ್ಟ್ ಮೊದಲ ವಾರ ಕಳೆದ ನಂತರ ಸಮಯ ನೀಡುವಂತೆಯೂ ವಿನಂತಿಸಲಾಗಿತ್ತು.