ಬೆಂಗಳೂರು, ಜು 31 (DaijiworldNews/DB): ವಿಧಾನ ಪರಿಷತ್ ಗೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಬಾಬುರಾವ್ ಚಿಂಚನಸೂರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆರ್ಟಿ ನಗರ ನಿವಾಸದಲ್ಲಿ ಕುಟುಂಬ ಸಮೇತ ಭೇಟಿಯಾಗಿ ಚರ್ಚೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಾಬುರಾವ್ ಚಿಂಚನಸೂರ್, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬಿಜೆಪಿ ತುಂಬಾ ಬಲಿಷ್ಟವಾಗಿದೆ. ಇಲ್ಲಿ ಬಿಜೆಪಿಯನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಇಲ್ಲಿ ಐದು ಬಾರಿ ನಾನು ಗೆಲುವು ಸಾಧಿಸಿದ್ದೆ. ನಮ್ಮ ಕೋಲಿ ಸಮಾಜ ಶೇ 45ರಷ್ಟು ಇದೇ ಭಾಗದಲ್ಲಿದೆ. ಪಕ್ಷ ನನ್ನನ್ನು ಗುರುತಿಸಿ ಟಿಕೆಟ್ ನೀಡಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ ಎಂದರು.
ಮುಂದಿನ ಬಾರಿ ಗುರುಮಿಟ್ಕಲ್ ಕ್ಷೇತ್ರದಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಇದೆ ಎಂದವರು ಇದೇ ವೇಳೆ ತಿಳಿಸಿದರು.
ಮುಂದೆ ಪ್ರಿಯಾಂಕ ಖರ್ಗೆ ಅವರ ಎದುರು ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಚಿಂಚನಸೂರ್, ಅವರ ಕಥೆಯಲ್ಲಾ ಇನ್ನು ಮುಗಿದ ಅಧ್ಯಾಯ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಈಗಾಗಲೇ ಹೆಚ್ಚು ಸಕ್ರಿಯವಾಗಿರುವ ಬಿಜೆಪಿ ಇನ್ನಷ್ಟು ಬಲಿಷ್ಟವಾಗಲಿದೆ ಎಂದರು.