ಜೈಪುರ, ಜು 31 (DaijiworldNews/DB): ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾದ ತಾಯಿಯನ್ನು ಮಗನೊಬ್ಬ ಹೆಲಿಕಾಪ್ಟರ್ನಲ್ಲಿ ಕರೆ ತಂದು ಆಕೆಯ ಆಸೆ ಪೂರೈಸಿದ್ದಾನೆ. ರಾಜಸ್ತಾನದಲ್ಲಿ ತನ್ನ ತಾಯಿಗೆ ಮಗ ಇಂತಹ ವಿಶಿಷ್ಟ ಉಡುಗೊರೆ ನೀಡಿದ್ದಾನೆ.
ಜೀವನದಲ್ಲಿ ಒಮ್ಮೆಯಾದರೂ ವಿಮಾನ, ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ತನ್ನ ತಾಯಿಗೂ ಇಂತಹುದೇ ಒಂದು ಸುಂದರ ಮತ್ತು ಸ್ಮರಣೀಯ ಅನುಭವವನ್ನು ಕಲ್ಪಿಸಿಕೊಡಬೇಕೆಂಬ ಉದ್ದೇಶದಿಂದ ಮಗ ಯೋಗೇಶ್ ಚೌಹಾಣ್ ತಾಯಿ ಶಿಕ್ಷಕ ವೃತ್ತಿಯಿಂದ ನಿವೃತ್ತಳಾದ ದಿನದಂದು ಹೆಲಿಕಾಪ್ಟರ್ನಲ್ಇ ಆಕೆಯನ್ನು ಕರೆ ತರಲು ಇಚ್ಚಿಸಿದರು. ಅದರಂತೆ ಶನಿವಾರ ಪಿಸಂಗನ್ನ ಕೇಸರಪುರ ಪ್ರೌಢಶಾಲೆಯಲ್ಲಿ ಕರ್ತವ್ಯದಿಂದ ನಿವೃತ್ತರಾದ ಸುಶೀಲಾ ಅವರಿಗಾಗಿ ಮಗ ಯೋಗೇಶ್ ಚೌಹಾಣ್ ಹೆಲಿಕಾಪ್ಟರ್ ರೈಡ್ ಅನ್ನು ಬುಕ್ ಮಾಡಿದರು. ಆ ಬಳಿಕ ಹೆಲಿಕಾಪ್ಟರ್ ಮೂಲಕ ತಾಯಿಯನ್ನು ಶಾಲೆಯಿಂದ ಮನೆಗೆ ಕರೆ ತಂದರು.
ಅಮೆರಿಕಾದಲ್ಲಿ ಎಂಜಿನಿಯರ್ ಆಗಿರುವ ಯೋಗೇಶ್ ಚೌಹಾಣ್ ತಾಯಿಯನ್ನು ಶಾಲೆಯಿಂದ ಹೆಲಿಕಾಪ್ಟರ್ ಹತ್ತಿಸುವಾಗ ಮತ್ತು ಮನೆ ಬಳಿ ಇಳಿಸುವಾಗ ಅವರನ್ನು ನೋಡಲು ಸಾಕಷ್ಟು ಜನ ನೆರೆದಿದ್ದರು. ಇಷ್ಟೊಂದು ಜನ ಸೇರುತ್ತಾರೆಂದು ನಾನು ಊಹಿಸಿಯೇ ಇರಲಿಲ್ಲ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.