ನವದೆಹಲಿ, ಜು 30 (DaijiworldNews/DB): ಧರ್ಮ ಮತ್ತು ಸಿದ್ದಾಂತದ ಹೆಸರಿನಲ್ಲಿ ಸಾಮರಸ್ಯ ಕದಡುವವರ ಬಗ್ಗೆ ಎಚ್ಚರದಿಂದಿರಬೇಕು. ಅಶಾಂತಿ ಸೃಷ್ಟಿಸುವ ಶಕ್ತಿಗಳ ಬಗ್ಗೆ ಜಾಗರೂಕತೆ ಅಗತ್ಯ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.
ದೆಹಲಿಯಲ್ಲಿ ಅಖಿಲ ಭಾರತ ಸೂಫಿ ಸಜ್ಜದನಶಿನ್ ಕೌನ್ಸಿಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಪ್ರಗತಿಯನ್ನು ಮತ್ತು ಹೆಸರನ್ನು ಹಾಳು ಮಾಡಲು ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ. ಅಂತಹ ವಾತಾವರಣ ಸೃಷ್ಟಿ ಮಾಡುವವರ ವಿರುದ್ದ ಸದಾ ಎಚ್ಚರದಿಂದಿರಬೇಕು. ಧರ್ಮ, ಸಿದ್ದಾಂತದ ಹೆಸರಿನಲ್ಲಿ ದ್ವೇಷ, ಸಂಘರ್ಷ ಉಂಟು ಮಾಡುತ್ತಿರುವುದು ಸರಿಯಲ್ಲ. ದೇಶದಿಂದಾಚೆಗೂ ಇದು ಹರಡುತ್ತಿದ್ದು, ಇಡೀ ದೇಶದ ಅಭಿವೃದ್ದಿಯ ಮೇಲೆ ಈ ತೆರನಾದ ಕೆಟ್ಟ ಬೆಳವಣಿಗೆಗಳು ಪರಿಣಾಮ ಬೀರುತ್ತಿದೆ ಎಂದವರು ಆತಂಕ ವ್ಯಕ್ತಪಡಿಸಿದರು.
ಕೆಲವು ಸಂಘಟನೆಗಳು ದೇಶದಲ್ಲಿ ಸಂಘರ್ಷ ಉಂಟು ಮಾಡಲೆಂದೇ ಹುಟ್ಟಿಕೊಂಡಿವೆ. ಇವು ಧರ್ಮದ ಹೆಸರಿನಲ್ಲಿ ನಿರಂತರವಾಗಿ ಸಂಘರ್ಷಗಳನ್ನು ಹುಟ್ಟುಹಾಕಿ ದೇಶದ ಶಾಂತಿ ಕೆಡಿಸುವಲ್ಲಿ ಕಾರಣವಾಗುತ್ತಿವೆ. ಏಕತೆಯಿಂದ ಮಾತ್ರ ದೇಶ ಮುನ್ನಡೆಯಲು ಸಾಧ್ಯ. ಅದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು. ದೇಶ ಪ್ರಗತಿ ಹೊಂದಿದರೆ ಎಲ್ಲಾ ಧರ್ಮದವರಿಗೂ ಅದರ ಪ್ರಯೋಜನ ಸಿಗುತ್ತದೆ ಎಂದರು.
ಧಾರ್ಮಿಕ ಮುಖ್ಯಸ್ಥರು ಶಾಂತಿ ಮತ್ತು ಏಕತೆಗಾಗಿ ಚರ್ಚಿಸಲು ಮತ್ತು ನಿರ್ಣಯವನ್ನು ಅಂಗೀಕರಿಸುವ ಸಂಬಂಧ ನಡೆದ ಸಭೆ ಇದಾಗಿತ್ತು.