ದಾವಣಗೆರೆ, ಜು 30 (DaijiworldNews/DB): ಪ್ರವೀಣ್ ಹಂತಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳದಿದ್ದರೆ ರಾಜೀನಾಮೆ ನೀಡುವುದಾಗಿ ಹೇಳಿದ್ದೆ. ಆದರೆ ಸಿಎಂ ಮತ್ತು ಸಂಘ ಪರಿವಾರದ ನಾಯಕರು ಬೇಡ ಎಂದ ಕಾರಣ ಅವರ ಮಾತಿಗೆ ಬೆಲೆ ಕೊಟ್ಟು ರಾಜೀನಾಮೆ ನಿರ್ಧಾರ ಕೈ ಬಿಟ್ಟಿದ್ದೇನೆ ಎಂದು ಶಾಸಕ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ನೀಡಿದರೆ ಬೇರೆಯದೇ ಸಂದೇಶ ರವಾನೆಯಾಗುತ್ತದೆ. ಅಲ್ಲದೆ ಕಾಂಗ್ರೆಸ್ಸಿಗರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಈ ನಿಟ್ಟಿನಲ್ಲಿ ರಾಜೀನಾಮೆ ನಿರ್ಧಾರ ಕೈ ಬಿಡಬೇಕು ಎಂಬುದಾಗಿ ಸಿಎಂ ಮತ್ತು ಸಂಘದ ಹಿರಿಯರು ಸಲಹೆ ಮಾಡಿದ್ದಾರೆ ಎಂದರು.
ಯಾರೂ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು. ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಸಹಕರಿಸೋಣ. ಸಮಾಜಘಾತುಕ ಕೃತ್ಯ ಎಸಗುವವರನ್ನು ಎನ್ಕೌಂಟರ್ ಮಾಡಬೇಕೆಂದು ಸಿಎಂಗೆ ಒತ್ತಾಯ ಮಾಡಿದ್ದೇನೆ. ಅಲ್ಪಸಂಖ್ಯಾಕ ಕೆಲವು ಗೂಂಡಾಗಳ ಅಟ್ಟಹಾಸ ಅತಿಯಾಗಿದೆ. ಉತ್ತರಪ್ರದೇಶ ಮಾದರಿಯಲ್ಲಿ ಅವರಿಗೆ ಉತ್ತರಿಸುವುದಾಗಿ ಸಿಎಂ ಹೇಳಿದ್ದಾರೆ. ದುಷ್ಟಶಕ್ತಿ, ಭಯೋತ್ಪಾದಕರ ಹೆಡೆಮುರಿ ಕಟ್ಟುವುದಾಗಿ ಗಂಗೆ ಮೇಲೆ ಪ್ರತಿಜ್ಞೆ ಮಾಡುವೆ ಎಂದವರು ತಿಳಿಸಿದರು.
ಹಿಂದೂ ಯುವಕರು ಕೈಗೆ ಬಳೆ ತೊಟ್ಟುಕೊಂಡಿಲ್ಲ. ಧೈರ್ಯದಿಂದ ಇರಬೇಕು. ಪ್ರತಿಭಟಿಸಿದರೆ ಕಾಂಗ್ರೆಸ್ಗೆ ಲಾಭವಾಗಿ ನಮಗೆ ತೊಂದರೆಯಾಗುತ್ತದೆ. ಪ್ರವೀಣ್ ಹತ್ಯೆಯಾದಂದಿನಿಂದಲೂ ಸಿಎಂ ಕಣ್ಣೀರು ಹಾಕುತ್ತಿದ್ದಾರೆ. ನಮ್ಮದೇ ಸರ್ಕಾರದಲ್ಲಿ ನಮ್ಮ ಕಾರ್ಯಕರ್ತರ ಕೊಲೆಯಾಗುತ್ತಿರುವುದಕ್ಕೆ ಅವರಿಗೆ ತೀವ್ರ ಬೇಸರವಿದೆ ಎಂದ ರೇಣುಕಾಚಾರ್ಯ, ಆತ್ಮಸ್ಥೈರ್ಯ ಕಳೆದುಕೊಳ್ಳದೆ ಧೈರ್ಯವಾಗಿರಿ ಎಂದು ಸಲಹೆ ಮಾಡಿದರು.