ಹುಬ್ಬಳ್ಳಿ, ಜು 30 (DaijiworldNews/DB): ರಾಷ್ಟ್ರಧ್ವಜ ವಿಚಾರದಲ್ಲಿ ಯಾವತ್ತೂ ಕೇಂದ್ರ ಸರ್ಕಾರ ಖಾದಿಯ ಮಹತ್ವವನ್ನು ಕುಗ್ಗಿಸುವ ಪ್ರಯತ್ನ ಮಾಡಿಲ್ಲ. ಆದರೆ ಕಾಂಗ್ರೆಸ್ ಈ ವಿಚಾರದಲ್ಲಿ ವೃಥಾ ರಾಜಕೀಯ ಮಾಡಲು ಮುಂದಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಮನೆಮನೆಗಳಲ್ಲಿಯೂ ಧ್ವಜಾರೋಹಣಕ್ಕೆ ಮನವಿ ಮಾಡಲಾಗಿದೆ. ಇದಕ್ಕಾಗಿ ಸುಮಾರು 10 ಕೋಟಿ ಧ್ವಜಗಳು ಅಗತ್ಯವಿರುವುದರಿಂದ ಎಲ್ಲವನ್ನೂ ಖಾದಿಯಿಂದ ಪೂರೈಸಲುಯ ಸಾಧ್ಯವಾಗದಕ್ಕೆ ಪರ್ಯಾಯರ ವ್ಯವಸ್ಥೆ ಮಾಡಲಾಗುತ್ತಿದೆ. ಖಾದಿ ಸಂಸ್ಥೆಗಳು ಎಷ್ಟೇ ಧ್ವಜ ತಯಾರಿಸಿದರೂ ಅದನ್ನು ನಾವು ಖರೀದಿಸುತ್ತೇವೆ. ಇದನ್ನು ಖಾದಿಯ ಮಹತ್ವ ಕುಗ್ಗಿಸುವ ಕೆಲಸ ಎನ್ನುವುದು ಸರಿಯಲ್ಲ ಎಂದು ತಿಳಿಸಿದರು.
ಖಾದಿ ವಿಚಾರವಾಗಿ ಕಾಂಗ್ರೆಸ್ ಹೋರಾಟ ಮತ್ತು ರಾಹುಲ್ ಗಾಂಧಿ ಹುಬ್ಬಳ್ಳಿಗೆ ಆಗಮಿಸುತ್ತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜನರನ್ನು ಒಗ್ಗೂಡಿಸುವ, ಮನೆಮನೆಗಳಲ್ಲಿ ಧ್ವಜಾರೋಹಣದ ಭಾವ ಬೆಳೆಸುವ ಕೆಲಸವನ್ನು ಕಾಂಗ್ರೆಸ್ ಎಂದಿಗೂ ಮಾಡಲಿಲ್ಲ. ಆದರೆ ಮೋದಿಯವರು ಅದನ್ನು ಮಾಡಿದರೆ ವಿರೋಧಿಸುವುದಷ್ಟೇ ಅವರ ಕೆಲಸ. ರಾಷ್ಟ್ರಧ್ವಜ ವಿಚಾರದಲ್ಲಿಯೂ ಇದೇ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ. ರಾಹುಲ್ ಅಲ್ಲ, ಸೋನಿಯಾ ಬೇಕಾದರೂ ಹುಬ್ಬಳ್ಳಿಗೆ ಬರಲಿ. ಬೇಡ ಎಂದು ನಾವ್ಯಾರೂ ಹೇಳಿಲ್ಲ ಎಂದರು.
ಕರಾವಳಿಯಲ್ಲಿ ನಡೆದ ಘಟನೆ ಅಕ್ಷಮ್ಯ. ಕೊಲೆಗೆ ಕೊಲೆ ಪರಿಹಾರವಲ್ಲ. ಶಾಂತಿ ಅಗತ್ಯ. ಮುಖ್ಯಮಂತ್ರಿಯವರು ಕರಾವಳಿ ವಿಚಾರದಲ್ಲಿ ಸಮರ್ಥ ಕ್ರಮ ವಹಿಸಿದ್ದಾರೆ. ಇಸ್ಲಾಂ ಹಿಂಸಾಚಾರ ಅಧಿಕವಾಗುತ್ತಿದ್ದು, ಈ ಬಗ್ಗೆ ಮಾತನಾಡಿದರೆ ವಿಪಕ್ಷಗಳು ನಮಗೆ ಕೋಮುವಾದಿ ಪಟ್ಟ ಕಟ್ಟುತ್ತಾರೆ ಎಂದು ಇದೇ ವೇಳೆ ಪ್ರಹ್ಲಾದ್ ಜೋಶಿ ತಿಳಿಸಿದರು.