ಆಂಧ್ರಪ್ರದೇಶ, ಜು 30 (DaijiworldNews/DB): ಸಮುದ್ರದಲ್ಲಿ ಸ್ನಾನ ಮಾಡಲು ಹೋದ ಏಳು ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ನಾಪತ್ತೆಯಾದ ಘಟನೆ ಆಂಧ್ರಪ್ರದೇಶದ ಪುಡಿಮಡಕ ಬೀಚ್ನಲ್ಲಿ ನಡೆದಿದೆ. ಈ ಪೈಕಿ ಮೂವರ ಶವ ಸಿಕ್ಕಿದ್ದು, ಓರ್ವ ಗಂಭೀರ ಸ್ಥಿತಿಯಲ್ಲಿದ್ದಾನೆ.
ಅನಕಾಪಲ್ಲಿಯ ಡಯಟ್ ಎಂಜಿನಿಯರಿಂಗ್ ಕಾಲೇಜಿನ ಏಳು ಮಂದಿ ವಿದ್ಯಾರ್ಥಿಗಳು ಶುಕ್ರವಾರ ಸಮುದ್ರದಲ್ಲಿ ಸ್ನಾನ ಮಾಡಲು ಹೋಗಿದ್ದರು. ಈ ವೇಳೆ ದೊಡ್ಡ ಅಲೆಗೆ ವಿದ್ಯಾರ್ಥಿಗಳು ಕೊಚ್ಚಿಕೊಂಡು ಹೋಗಿದ್ದಾರೆ. ಬಳಿಕ ಪವನ್ ಕುಮಾರ್ ಎಂಬಾತ ಅದೇ ದಿನ ಶವವಾಗಿ ಪತ್ತೆಯಾಗಿದ್ದ. ತೇಜ ಎಂಬ ಇನ್ನೊಬ್ಬ ವಿದ್ಯಾರ್ಥಿ ಚಿಂತಾಜನಕ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಇಂದು ಮತ್ತಿಬ್ಬರ ಮೃತದೇಹ ಪತ್ತೆಯಾಗಿದೆ. ವಿದ್ಯಾರ್ಥಿಗಳಾದ ಜಸ್ವಂತ್ ಕುಮಾರ್ ಮತ್ತು ಪೆಂಟಕೋಟ ಗಣೇಶ್ ಎಂಬಿಬ್ಬರ ಮೃತದೇಹಗಳನ್ನು ರಕ್ಷಣಾ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಉಳಿದ ಮೂವರು ವಿದ್ಯಾರ್ಥಿಗಳಾದ ಕಂಪಾರ ಜಗದೀಶ್, ಬಯ್ಯಪುನೇನಿ ಸತೀಶ್ ಕುಮಾರ್ ಮತ್ತು ಪುಡಿ ರಾಮಚಂದು ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಹೆಲಿಕಾಪ್ಟರ್ ಮತ್ತು ಕೋಸ್ಟ್ ಗಾರ್ಡ್ ಬೋಟ್ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಮೃತ ವಿದ್ಯಾರ್ಥಿಗಳ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಕುಟುಂಬಕ್ಕೆ ಅಗತ್ಯ ಸಹಾಯ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.