ಬೆಂಗಳೂರು, ಜು 30 (DaijiworldNews/DB): ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಬೆಂಗಳೂರಿನ ಜಯಮಹಲ್ ನಲ್ಲಿರುವ ನಿವಾಸಕ್ಕೆ ಎಬಿವಿಪಿ ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನುಗ್ಗಲು ಯತ್ನಿಸಿ ಹೈಡ್ರಾಮ ಸೃಷ್ಟಿಸಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಈ ವೇಳೆ ಪೊಲೀಸರು ಲಾಠಿಚಾರ್ಜ್ ನಡೆಸಿ ಕಾರ್ಯಕರ್ತರನ್ನು ತಡೆದರು.
ಕರಾವಳಿಯಲ್ಲಿ ಇತ್ತೀಚೆಗೆ ನಡೆದ ಸರಣಿ ಹತ್ಯೆ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ನಡೆದ ಕೊಲೆ ಪ್ರಕರಣಗಳ ವಿಚಾರದಲ್ಲಿ ಕ್ರಮ ಕೈಗೊಳ್ಳುವಲ್ಲಿ ಗೃಹ ಸಚಿವರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಎಬಿವಿಪಿ ಮತ್ತು ಇತರ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಅಲ್ಲದೆ ಕ್ರಮಕ್ಕೆ ಒತ್ತಾಯಿಸಿ ಗೃಹ ಸಚಿವರಿಗೆ ಮನವಿ ಸಲ್ಲಿಸಲು ಮುಂದಾಗಿದ್ದರು. ಆದರೆ ಸಚಿವರ ನಿವಾಸದ ಮುಂದೆ ಪ್ರತಿಭಟನೆ ನಡೆಸಲು ಪೊಲೀಸರು ಅವಕಾಶ ಕೊಡಲಿಲ್ಲ. ಇದರಿಂದ ಆಕ್ರೋಶಿತರಾದ ಕಾರ್ಯಕರ್ತರು ಸಚಿವರ ಮನೆ ಗೇಟ್ ತಳ್ಳಿ ಒಳ ನುಗ್ಗಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಕಾರ್ಯಕರ್ತರನ್ನು ತಡೆದರು.
ಬಿಜೆಪಿ ಸರ್ಕಾರ ಇದ್ದರೂ ಹಿಂದುತ್ವವಾದಿಗಳ ಕೊಲೆಯಾಗುತ್ತಿದೆ. ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಈ ಮುತ್ತಿಗೆ ಹಾಕಲಾಗಿದೆ. ಹಿಂದುತ್ವವಾದಿಗಳ ರಕ್ಷಣೆ ಮಾಡಲಾಗದ ಸರ್ಕಾರಕ್ಕೆ ಧಿಕ್ಕಾರ. ಹರ್ಷ, ಪ್ರವೀಣ, ನಾಳೆ ನಾವು ಎಂದು ಕಾರ್ಯಕರ್ತರು ಈ ವೇಳೆ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಆರಗ ಜ್ಞಾನೇಂದ್ರ ಅವರು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದೂ ಒತ್ತಾಯಿಸಿದರು.
ಪ್ರತಿಭಟನೆ ನಡೆಸುತ್ತಿದ್ದ ಮತ್ತು ಮುತ್ತಿಗೆ ಹಾಕಲು ಯತ್ನಿಸಿದ ಹಲವು ಕಾಯರ್ತಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಸ್ಥಳದಿಂದ ಬೇರೆಡೆಗೆ ಕೊರೆದೊಯ್ದರು. ಎಬಿವಿಪಿ ಕಾರ್ಯಕರ್ತರು ಗೃಹ ಸಚಿವರ ನಿವಾಸದ ಬಾಗಿಲಲ್ಲೇ ಮಲಗಿ ಪ್ರತಿಭಟಿಸಿದರು.