ನವದೆಹಲಿ, ಜು 30 (DaijiworldNews/DB): ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು 'ರಾಷ್ಟ್ರಪತ್ನಿ' ಎಂದು ಸಂಬೋಧಿಸಿದ್ದ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವರು ರಾಷ್ಟ್ರಪತಿಯವರಿಗೆ ಪತ್ರ ಬರೆದು ಕ್ಷಮೆ ಯಾಚಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಅಧೀರ್ ರಂಜನ್ ಚೌಧರಿ ಅವರನ್ನು ರಾಷ್ಟ್ರಪತ್ನಿ ಎಂದು ಕರೆದಿದ್ದರು. ಬಳಿಕ ನಾಲಗೆ ಸ್ಲಿಪ್ ಆಗಿ ಹಾಗೆ ಕರೆದಿದ್ದು, ಅದಕ್ಕಾಗಿ ರಾಷ್ಟ್ರಪತಿಯವರನ್ನು ಕ್ಷಮೆ ಯಾಚಿಸುವುದಾಗಿ ಹೇಳಿದ್ದರು. ಇದೀಗ ಮುರ್ಮು ಅವರಿಗೆ ಪತ್ರ ಬರೆದು ಚೌಧರಿ ಕ್ಷಮೆ ಕೇಳಿದ್ದಾರೆ.
ನೀವು ಹೊಂದಿರುವ ಸ್ಥಾನದ ಬಗ್ಗೆ ಮಾತನಾಡುವಾಗ ತಪ್ಪು ಪದ ಉಚ್ಚರಿಸಿದ್ದಾಗಿ ವಿಷಾದ ವ್ಯಕ್ತಪಡಿಸಲು ಈ ಪತ್ರ ಬರೆಯುತ್ತಿದ್ದೇನೆ. ನಾಲಿಗೆ ಹೊರಳಿ ಈ ರೀತಿ ಕರೆದಿದ್ದೇನೆಯೇ ಹೊರತು ಉದ್ದೇಶಪೂರ್ವಕವಾಗಿ ಅಲ್ಲ.ನನ್ನ ಈ ಅಚಾತರ್ಯಕ್ಕಾಗಿ ನಿಮ್ಮಲ್ಲಿ ನಾನು ಕ್ಷಮೆ ಯಾಚಿಸುತ್ತೇನೆ ಮತ್ತು ನೀವು ಅದನ್ನು ಸ್ವೀಕರಿಸಬೇಕಾಗಿ ವಿನಂತಿಸುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಚೌಧರಿ ಹೇಳಿಕೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಬಿಜೆಪಿ, ಕಾಂಗ್ರೆಸ್ ನಾಯಕನ ಹೇಳಿಕೆ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿತ್ತು.