ಬೆಂಗಳೂರು, ಜು 29 (DaijiworldNews/DB): ಪರೇಶ್ ಮೇಸ್ತ, ರುದ್ರೇಶ್ ಹತ್ಯೆ ಪ್ರಕರಣಗಳನ್ನು ಎನ್ಐಎ ತನಿಖೆಗೆ ವಹಿಸಲಾಗಿತ್ತು. ಆದರೆ ಆ ತನಿಖೆ ಈಗ ಏನಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೈಲಾಗದವರು ಎಸ್ಡಿಪಿಐ, ಪಿಎಫ್ಐನಿಂದ ಕೊಲೆಯಾಗಿದೆ ಎಂದು ಅಪಪ್ರಚಾರ ಮಾಡುತ್ತಾರೆ. ಹೆಣ ಬಿದ್ದರೆ ಸಾಕು, ಅಲ್ಲಿಗೆ ಓಡುತ್ತಾರೆ. ಪರೇಶ್ ಮೇಸ್ತ, ರುದ್ರೇಶ್ ಹತ್ಯೆ ಆದಾಗ ಅಲ್ಲಿಗೆ ರಣಹದ್ದುಗಳಂತೆ ಓಡಿದರು. ಆದರೆ ಆ ವಪ್ರಕರಣಗಳ ತನಿಖೆ ಏನಾಯಿತು ಎಂಬುದನ್ನು ಸರ್ಕಾರ ಹೇಳಲಿ ಎಂದರು.
ನಾನು ಗೃಹ ಸಚಿವನಾಗಿದ್ದ ವೇಳೆ ರಾಜಕೀಯ ಕಾರಣಕ್ಕೆ ನಾಲ್ಕು ಕೊಲೆಯಾಗಿತ್ತು. ಅಪಘಾತ, ವೈಯಕ್ತಿಕ ಕಾರಣಕ್ಕೆ ಕೊಲೆಯಾಗಿದ್ದರು. ಅಷ್ಟೇ ಸಂಖ್ಯೆಯಲ್ಲಿ ಪಿಎಫ್ಐ, ಎಸ್ಡಿಪಿನವರ ಕೊಲೆಯೂ ಆಗಿತ್ತು. ಆದರೆ ನಡೆಸಿದವರು ಯಾರು? ನಗ್ನಸತ್ಯ ಎಂಬ ಪುಸ್ತಕವನ್ನೂ ಬಿಡುಗಡೆ ಮಾಡಿದ್ದೆ. ಸಂಪೂರ್ಣ ವಿವರವನ್ನೂ ಈ ಕೊಲೆ ಸಂಬಂಧ ಪಡೆದಿದ್ದೆ. ಕೊಲೆ ಮಾಡಿದವರು ನೇರವಾಗಿ ಬಂದು ಶರಣಾಗುತ್ತಿದ್ದರು. ಬಳಿಕ ಅವರ ಪರ ವಕೀಲರು ಬಿಡಿಸಿಕೊಂಡು ಹೋಗುತ್ತಿದ್ದರು. ವ್ಯವಸ್ಥಿತವಾಗಿಯೇ ಇದು ನಡೆಯುತ್ತಿತ್ತು. ಕೊಲೆಗಡುಕರ ಹೆಸರು ಮಾತ್ರ ಎಫ್ಐಆರ್ನಲ್ಲಿ ಇರುತ್ತಿತ್ತು, ಸಹಕರಿಸಿದವರದ್ದು ಇರುತ್ತಿರಲಿಲ್ಲ ಎಂದು ಅವೆರು ಮಾಹಿತಿ ನೀಡಿದರು.
ನಾಲ್ಕು ವರ್ಷಗಳಿಂದ ಯಾವುದೇ ಹತ್ಯೆ ಪ್ರಕರಣ ನಡೆದಿರಲಿಲ್ಲ. ಆದರೆ ಈಗ ಮತ್ತೆ ಶುರುವಾಗಿವೆಂಬ ಬಿಜೆಪಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕೊಲೆ ಯತ್ನ ಸೇರಿದಂತೆ ಹಲವು ಕೇಸ್ಗಳನ್ನು ವಾಪಾಸ್ ಪಡೆದಿದ್ದಾರೆ. ಆದರೆ ಯಾಕೆ ವಾಪಾಸ್ ಪಡೆಯಲಾಗಿದೆ ಎಂದು ಹೇಳುತ್ತಿಲ್ಲ. ಈಗ ಬಾಯಿಗೆ ಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.