ಶಿವಮೊಗ್ಗ, ಜು 29 (DaijiworldNews/HR): ನಮ್ಮ ಹುಡುಗರಿಗೆ ಮೆಚುರಿಟಿ ಕಡಿಮೆ ಹಾಗಾಗಿ ರಾಜೀನಾಮೆ ನೀಡಿದ್ದಾರೆ. ಅವರು ರಾಜೀನಾಮೆ ಕೊಟ್ರೆ ಹೊಸಬರು ಬರ್ತಾರೆ, ಬಿಜೆಪಿಗೇನು ಕಾರ್ಯಕರ್ತರು ಸಿಗುವುದಿಲ್ಲವೇ? ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಬಳಿಕ ಬಿಜೆಪಿಯ ಅನೇಕ ಪದಾಧಿಕಾರಿಗಳು ರಾಜೀನಾಮೆ ನೀಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ನಮ್ಮ ಹುಡುಗರಿಗೆ ಪ್ರಬುಧ್ದತೆ ಕಡಿಮೆ ಹಾಗಾಗಿ ಹಿರಿಯರ ಬಗ್ಗೆ ಮಾತನಾಡುತ್ತಾರೆ. ಹಿರಿಯರಾಗಿ ಅವರು ಬೈದರು ಎಂದು ನಾವು ಅವರಿಗೆ ವಾಪಸ್ ಬೈಯುವುದೇ ಸರಿಯೇ. ನಾವು ಅವರನ್ನು ಸಮಾಧಾನ ಮಾಡುತ್ತೇವೆ ಎಂದಿದ್ದಾರೆ.
ಯುವ ಕಾರ್ಯಕರ್ತರು ರಾಜೀನಾಮೆ ಕೊಟ್ಟರು ಎಂದಾಕ್ಷಣ ಅವರ ರಾಜೀನಾಮೆ ಅಂಗೀಕಾರ ಮಾಡಿ ಮನೆಗೆ ಕಳುಹಿಸುವುದು ಕೇವಲ ಐದು ನಿಮಿಷದ ಕೆಲಸ. ಆದರೆ ಅವರಿಗೆ ಸಮಾಧಾನ ಮಾಡುತ್ತೇವೆ. ಬದಲಾಗುತ್ತಾರೆ ಎಂಬ ನಂಬಿಕೆ ನಮಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಶ್ಯಾಮಪ್ರಸಾದ್ ಮುಖರ್ಜಿಗೆ ಸಾಯುತ್ತೇನೆ ಎಂದು ಗೊತ್ತಿದ್ದರು ಏಕೆ ಸಾಯಲು ಹೋದರು? ನಾನು ರಾಜೀನಾಮೆ ನೀಡಿ ಹೋಗುತ್ತೇನೆ ಎಂದು ಅವರು ಹೇಳಿದ್ದರಾ? ಪಂಡಿತ್ ದೀನದಯಾಳು ಉಪಾಧ್ಯಾಯ ಅವರನ್ನು ರೈಲಿನಲ್ಲಿ ಕೊಂದು ಹಾಕಿದರು. ಅವರು ನನಗೆ ಪಕ್ಷ ಬೇಡ ಎಂದು ಹೋರಹೋಗಿದ್ದರಾ ಎಂದು ಪ್ರಶ್ನಿಸಿದ್ದಾರೆ.
ರಾಜೀನಾಮೆಗೆ ಒಂದು ವೇಳೆ ರಾಜ್ಯಾಧ್ಯಕ್ಷರು ಒಪ್ಪಿಕೊಂಡರೇ ಅವರ ಸ್ಥಾನಕ್ಕೆ ಹೊಸಬರು ಬರುತ್ತಾರೆ. ಈಗ ಬಿಜೆಪಿಗೆ ಕಾರ್ಯಕರ್ತರು ಸಿಗುವುದಿಲ್ಲವೇ? ಇವರು ಆಕ್ರೋಶ ಮತ್ತು ಸಿಟ್ಟಿನಿಂದ ಮಾತ್ರ ಅವರು ರಾಜೀನಾಮೆ ಕೊಟ್ಟಿದ್ದಾರೆ. ಅವರು ಪ್ರಾಣ ಹೋದರೂ ಬಿಜೆಪಿ ಪಕ್ಷ ಮತ್ತು ಹಿಂದುತ್ವ ಬಿಟ್ಟು ಹೋಗುವುದಿಲ್ಲ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ.