ನವದೆಹಲಿ, ಜು 29 (DaijiworldNews/DB): ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕಾಂಗ್ರೆಸ್ ಮುಖಂಡರಿಗೆ ದೆಹಲಿ ಹೈಕೋರ್ಟ್ ಶುಕ್ರವಾರ ಸಮನ್ಸ್ ಜಾರಿ ಮಾಡಿದೆ.
ಕಾಂಗ್ರೆಸ್ ಮುಖಂಡರಾದ ಜೈರಾಮ್ ರಮೇಶ್, ಪವನ್ ಖೇರಾ ಮತ್ತು ನೆಟ್ಟಾ ಡಿ'ಸೋಜಾ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಅಲ್ಲದೆ, ಸ್ಮೃತಿ ಇರಾನಿ ಅವರ ಮಗಳಿಗೆ ಸಂಬಂಧಿಸಿದ ಈ ಮೂವರು ಟ್ವೀಟರ್ನಲ್ಲಿ ಹಾಕಿರುವ ಫೋಟೋ, ವೀಡಿಯೋಗಳ ಟ್ವೀಟ್, ರೀಟ್ವೀಟ್ಗಳನ್ನು 24ಗಂಟೆಯೊಳಗೆ ಅಳಿಸಿ ಹಾಕುವಂತೆ ಸೂಚನೆ ನೀಡಲಾಗಿದೆ. ವಿಫಲವಾದಲ್ಲಿ ಟ್ವಿಟರ್, ಫೇಸ್ಬುಕ್ ಸಂಸ್ಥೆಯೇ ಈ ಕೆಲಸವನ್ನು ಮಾಡಲಿದೆ ಎಂದು ಕೋರ್ಟ್ ತಿಳಿಸಿದೆ.
ಸ್ಮೃತಿ ಇರಾನಿ ಮಗಳು ಗೋವಾದಲ್ಲಿ ಕಾನೂನು ಬಾಹಿರವಾಗಿ ಬಾರ್ ನಡೆಸುತ್ತಿರುವುದಾಗಿ ಮೂವರು ಕಾಂಗ್ರೆಸ್ ಮುಖಂಡರು ಟ್ವೀಟ್, ಫೋಟೋ, ವೀಡಿಯೋಗಳನ್ನು ಹಂಚಿಕೊಂಡಿದ್ದರು. ಇದರಿಂದ ಕುಪಿತರಾದ ಸ್ಮೃತಿ ಇರಾನಿ ತನ್ನ ಹಾಗೂ ಮಗಳ ವಿರುದ್ಧ ಆಧಾರರಹಿತ ಆರೋಪ ಮಾಡಿರುವುದಾಗಿ ಮೂವರು ಕಾಂಗ್ರೆಸ್ ಮುಖಂಡರ ವಿರುದ್ಧ 2 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಜೈರಾಮ್ ರಮೇಶ್, ಖೇರಾ ಮತ್ತು ನೆಟ್ಟಾ ಡಿಸೋಜಾ ಅವರಿಗೆ ಆಗಸ್ಟ್ 18ರಂದು ಕೋರ್ಟ್ ಗೆ ಹಾಜರಾಗುವಂತೆ ನಿರ್ದೇಶಿಸಿದೆ.