ಬೆಂಗಳೂರು, ಜು 29 (DaijiworldNews/DB): ಬಿಜೆಪಿ ಹಾಕಿದ್ದ ಕೇಸ್ಗಳನ್ನು ಖುಲಾಸೆಗೊಳಿಸಿ ಆರೋಪಿಗಳಿಗೆ ಬಿರಿಯಾನಿ ಊಟ ಹಾಕಿ ಆರಾಮವಾಗಿ ಓಡಾಡಲು ಬಿಟ್ಟ ಕಾಂಗ್ರೆಸ್ಸಿಗರು ಮಮಗೆ ಬುದ್ದಿ ಹೇಳುವ ಅವಶ್ಯಕತೆ ಇಲ್ಲ. ಆ ನೈತಿಕತೆಯೂ ಅವರಿಗಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು, ಸುವ್ಯವಸ್ಥೆ ಹಾಗೂ ಸಮಾಜಕ್ಕೆ ಕಂಟಕವಾಗಿದ್ದ ಕೆಲವು ಸಂಘಟನೆಗಳ ವಿರುದ್ದ ನಾವು ಅಧಿಕಾರದಲ್ಲಿದ್ದ ವೇಳೆ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದೆವು. ಆದರೆ ಬಳಿಕ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಅವರನ್ನು ಎಲ್ಲಾ ಕೇಸ್ಗಳಿಂದ ಖುಲಾಸೆಗೊಳಿಸಿತ್ತು. ಅಲ್ಲದೆ, ಖುಲಾಸೆಗೊಂಡವರಿಗೆ ಬಿರಿಯಾನಿ ಊಟ ಹಾಕಿ ಆರಾಮವಾಗಿ ಓಡಾಡಲು ಬಿಟ್ಟಿದ್ದರು. ಆದರೆ ಈಗ ಬಿಜೆಪಿ ಆಡಳಿತದಲ್ಲಿ ಜನರಿಗೆ ರಕ್ಷಣೆ ಇಲ್ಲ ಎಂದು ಟೀಕಿಸುತ್ತಿದ್ದಾರೆ ಎಂದರು.
ಭಯೋತ್ಪಾದಕರು, ವಿಚಿದ್ರಕಾರಿ ಶಕ್ತಿಗಳು ಬಿಜೆಪಿ ಅಧಿಕಾರದಲ್ಲಿರುವುದರಿಂದ ಸದ್ಯ ನಿಯಂತ್ರಣದಲ್ಲಿವೆ. ಕಾನೂನು ವ್ಯಾಪ್ತಿಯಲ್ಲಿ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಮುಂದೆಯೂ ಸರ್ಕಾರ ಬಿಗುಗೊಳಿಸಲಿದೆ ಎಂದು ತಿಳಿಸಿದರು.
ಸುರತ್ಕಲ್ನಲ್ಲಿ ಫಾಜಿಲ್ ಎಂಬ ಯುವಕನ ಕೊಲೆಗೆ ನಿಖರ ಕಾರಣ ಗೊತ್ತಿಲ್ಲ. ವೈಯಕ್ತಿಕ ದ್ವೇಷ ಮತ್ತು ಪ್ರೀತಿ ಪ್ರೇಮದ ಕಾರಣ ಎಂದೆಲ್ಲ ಹೇಳುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಈಗಾಗಲೇ ತನಿಖೆಗೆ ಆದೇಶಿಸಿದ್ದು ದುಷ್ಕರ್ಮಿಗಳ ಪತ್ತೆ ಕಾರ್ಯ ನಡೆದಿದೆ. ತನಿಖೆ ಬಳಿಕ ನಿಖರ ಕಾರಣ ಗೊತ್ತಾಗಲಿದೆ. ಹಿಂದೂ, ಮುಸ್ಲಿಂ ಎಲ್ಲರೂ ಒಂದೇ. ಅಮಾನವೀಯ ಕೃತ್ಯಗಳನ್ನು ಸರ್ಕಾರ ಎಂದಿಗೂ ಸಹಿಸುವುದಿಲ್ಲ ಎಂದವರು ಇದೇ ವೇಳೆ ಎಚ್ಚರಿಸಿದರು.