ನವದೆಹಲಿ, ಜು 29 (DaijiworldNews/DB): ಬೆಲೆ ಏರಿಕೆ, ಹಣದುಬ್ಬರದಂತಹ ವಿಚಾರಗಳನ್ನು ಮುಚ್ಚಿ ಹಾಕಲು ಅದರ ಬಗ್ಗೆ ಚರ್ಚೆಗೆ ಅವಕಾಶಕೊಡದೆ ಆಡಳಿತ ಪಕ್ಷದ ಸಂಸದರು ಉದ್ದೇಶಪೂರ್ವಕವಾಗಿ ಲೋಕಸಭೆಯಲ್ಲಿ ಗದ್ದಲ ಉಂಟು ಮಾಡುತ್ತಿದ್ದಾರೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ರಾಷ್ಟ್ರಪತ್ನಿ ಹೇಳಿಕೆ ಕುರಿತಂತೆ ಅಧಿರ್ ಚೌಧರಿ ಕ್ಷಮೆಯಾಚಿಸಿದ್ದರೂ, ಸೋನಿಯಾ ಗಾಂಧಿಯವರು ಕ್ಷಮೆಯಾಚಿಸುವಂತೆ ಒತ್ತಾಯಿಸಿ ಬಿಜೆಪಿಯವರು ಸುಖಾಸುಮ್ಮನೆ ಘೋಷಣೆ ಕೂಗಿ ಚರ್ಚೆಗೆ ತೊಂದರೆ ಮಾಡುತ್ತಿದ್ದಾರೆ ಎಂದಿದ್ದಾರೆ.
ಬೆಲೆ ಏರಿಕೆ, ಹಣದುಬ್ಬರಗಳ ಬಗ್ಗೆ ವಿಪಕ್ಷಗಳು ಮಾತನಾಡುತ್ತಿವೆ. ಆದರೆ ವಿಪಕ್ಷಗಳು ಇದರ ಬಗ್ಗೆ ಮಾತನಾಡದಂತೆ ತಡೆಯುವುದು ಅವರ ಉದ್ದೇಶ. ಅದಕ್ಕಾಗಿ ಈ ಗದ್ದಲ ಎಂದವರು ತಿಳಿಸಿದ್ದಾರೆ.