ಬೆಂಗಳೂರು, ಜು 29 (DaijiworldNews/DB): ಕಾಂಗ್ರೆಸ್ ಸರ್ಕಾರವಿದ್ದಾಗ ಕಲ್ಲು ಹೊಡೆದ, ಸಾರ್ವಜನಿಕ ಆಸ್ತಿಗಳನ್ನು ಹಾಳುಗೆಡವಿದ ಭವ್ಯ ಇತಿಹಾಸವನ್ನೇ ಹೊಂದಿದೆ ಬಿಜೆಪಿ ! ಈಗ ಅವರ ವಿರುದ್ಧವೇ ಜನಾಕ್ರೋಶದ ಕಲ್ಲುಗಳು ಬೀಳುತ್ತಿವೆ ಎಂದು ಕರ್ನಾಟಕ ಕಾಂಗ್ರೆಸ್ ವ್ಯಂಗ್ಯ ಮಾಡಿದೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ ಖಂಡಿಸಿ ಬಿಜೆಪಿ ಯುವ ಮೋರ್ಚಾದ ಹಲವು ಪದಾಧಿಕಾರಿಗಳು ರಾಜೀನಾಮೆ ನೀಡುತ್ತಿರುವ ಹಿನ್ನೆಲೆಯಲ್ಲಿ ಮನವೊಲಿಸುವ ಸಂಬಂಧ ಪದಾಧಿಕಾರಿಯೊಬ್ಬರಿಗೆ ಕರೆ ಮಾಡಿದ ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ಸರ್ಕಾರವಿದ್ದಿದ್ದರೆ ಕಲ್ಲು ಹೊಡೆಯಬಹುದಿತ್ತು ಎಂದು ಹೇಳಿರುವ ಆಡಿಯೋ ವೈರಲ್ ಆದ ಬೆನ್ನಲ್ಲೇ ಕಾಂಗ್ರೆಸ್ ಟ್ವೀಟ್ ಮಾಡಿ ಬಿಜೆಪಿ ವಿರುದ್ದ ಕಿಡಿ ಕಾರಿದೆ.
ಅಂದು ನಾವು ಬುಲ್ಡೋಸರ್ ಹತ್ತಿಸಿದ್ದರೆ ಇಂದು ಈ ಸಮಾಜಘಾತುಕರು ಚಿಗುರುತ್ತಿರಲಿಲ್ಲ, ಆದರೆ ನಾವು ಸಂವಿಧಾನದ ವಿರುದ್ಧ ವರ್ತಿಸುವ ತಪ್ಪು ಮಾಡಲಿಲ್ಲ. ನಮ್ಮ ಸರ್ಕಾರವಿದ್ದಾಗ ಕಲ್ಲು ಹೊಡೆದ, ಸಾರ್ವಜನಿಕ ಆಸ್ತಿ ಹಾನಿ ಮಾಡಿದ ಭವ್ಯ ಇತಿಹಾಸವನ್ನೇ ಬಿಜೆಪಿ ಹೊಂದಿದೆ. ಆದರೆ ಅವರ ವಿರುದ್ದ ಜನಾಕ್ರೋಶದ ಕಲ್ಲುಗಳು ಈಗ ಬೀಳುತ್ತಿವೆ ಎಂದಿದೆ.