ತೆಲಂಗಾಣ, ಜು 29 (DaijiworldNews/HR): ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಪಾಲಮುರು ಏತ ನೀರಾವರಿ ಯೋಜನೆ ಕಾಮಗಾರಿ ನಡೆಯುತ್ತಿದ್ದ ವೇಳೆ ಕ್ರೇನ್ ತಂತಿ ತುಂಡಾಗಿ 5 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಐವರು ಕಾರ್ಮಿಕರನ್ನು ಪೂರ್ವ ಗೋದಾವರಿ ಜಿಲ್ಲೆಯ ಸಿನು (35), ಜಾರ್ಖಂಡ್ನ ಭೋಲಾನಾಥ್ (40), ಪ್ರವೀಣ್, ಕಮಲೇಶ್ ಮತ್ತು ಸೋನು ಕುಮಾರ್ ಎಂದು ಗುರುತಿಸಲಾಗಿದೆ.
ಇನ್ನು 100 ಅಡಿ ಆಳದ ಸುರಂಗದಲ್ಲಿ ಕಾಂಕ್ರೀಟ್ ಕೆಲಸ ಮಾಡುತ್ತಿದ್ದ ಏಳು ಕಾರ್ಮಿಕರು ಕೆಲಸ ಮುಗಿಸಿ ಹೊರಗೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ಅವರು 70 ಅಡಿ ಮೇಲಕ್ಕೆ ಬರುತ್ತಿದ್ದಂತೆ, ಕ್ರೇನ್ನ ಕೇಬಲ್ ತುಂಡಾಗಿ ಮತ್ತೆ ಅವರು ಆಳವಾದ ಸುರಂಗಕ್ಕೆ ಬಿದ್ದ ಪರಿಣಾಮ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಇಂದು ಮುಂಜಾನೆ ಹೈದರಾಬಾದ್ನ ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.