ನವದೆಹಲಿ, ಜು 29 (DaijiworldNews/DB): ಪ್ರವೀಣ್ ನೆಟ್ಟಾರು ಹತ್ಯೆ ನಡೆದು 48 ಗಂಟೆಯಾದರೂ ಆರೋಪಿಗಳು ಕಂಬಿ ಎಣಿಸಿಲ್ಲ. ನಾವು ನಾಲ್ಕೇ ಗಂಟೆಯೊಳಗೆ ಆರೋಪಿಗಳ ಹೆಡೆಮುರಿ ಕಟ್ಟಿದ್ದೆವು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಖಂಡಿಸಿ ಟ್ವೀಟ್ ಮಾಡಿರುವ ಅವರು, ಈ ಭೀಕರ ಹತ್ಯೆ ಖಂಡನೀಯ. ಉದಯಪುರದಲ್ಲಿ ಕನ್ಹಯ್ಯಾಲಾಲ್ ಹತ್ಯೆ ಆರೋಪಿಗಳನ್ನು ರಾಜಸ್ಥಾನ ಪೊಲೀಸರು 4 ಗಂಟೆಯೊಳಗೆ ಬಂಧಿಸಿದ್ದರು. ಆದರೆ ಪ್ರವೀಣ್ ಹತ್ಯೆ ನಡೆದು ದಿನಗಳು ಕಳೆದರೂ ಇನ್ನೂ ಆರೋಪಿಗಳ ಬಂಧನವಾಗಿಲ್ಲ ಎಂದಿದ್ದಾರೆ.
ದುಃಖದ ಸಮಯದಲ್ಲಿ ಮೃತರ ಮನೆಯವರೊಂದಿಗೆ ಇರುವುದು ತೀರಾ ಅಗತ್ಯ. ಕನ್ಹಯ್ಯಾ ಕುಟುಂಬದ ಬೆಂಗಾವಲಾಗಿ ನಿಲ್ಲಲು ಅವರ ಇಬ್ಬರು ಪುತ್ರರಿಗೂ ಸರ್ಕಾರಿ ಉದ್ಯೋಗ ನೀಡಲಾಗಿದೆ. ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಲಾಗಿದೆ. ಕರ್ನಾಟಕ ಸರ್ಕಾರವು ಆರೋಪಿಗಳನ್ನು ಶೀಘ್ರ ಬಂಧಿಸಿ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಅವರು ಈ ವೇಳೆ ಒತ್ತಾಯಿಸಿದ್ದಾರೆ.