ನವದೆಹಲಿ, ಜು 29 (DaijiworldNews/DB): ಗುಜರಾತ್ನಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮತ್ತು ಮಾದಕ ವಸ್ತು ಮಾರಾಟದಲ್ಲಿ ಶಾಮೀಲಾದ ಮಾಫಿಯಾಗಳಿಗೆ ಯಾವ ಆಡಳಿತ ರಕ್ಷಣೆ ನೀಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ವಿಷಕಾರಿ ಮದ್ಯ ಸೇವನೆಯಿಂದಾಗಿ ಗುಜರಾತ್ನಲ್ಲಿ ಇತ್ತೀಚೆಗೆ ಘಟಿಸಿದ ದುರಂತದ ಬಗ್ಗೆ ಕಳವಳ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಅವರು, ಘಟನೆಯಿಂದಾಗಿ ಹಲವು ಮನೆಗಳು ನಾಶವಾಗಿವೆ. ಕೋಟ್ಯಾಂತರ ರೂ. ಮೌಲ್ಯದ ಡ್ರಗ್ಸ್ನ್ನು ನಿರಂತರವಾಗಿ ಅಲ್ಲಿ ವಶಪಡಿಸಿಕೊಳ್ಳಲಾಗುತ್ತಿದೆ. ಬಾಪು (ಮಹಾತ್ಮಾ ಗಾಂಧಿ) ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಂತಹ ಮಹಾನ್ ವ್ಯಕ್ತಿಗಳ ಭೂಮಿಯಲ್ಲಿ ಅಕ್ರಮವಾಗಿ ಮದ್ಯ ವ್ಯಾಪಾರ ಮಾಡಿ ಅಮಾಯಕರ ಜೊತೆ ಆಟ ಆಡುತ್ತಿರುವವರು ಯಾರು? ಇದಕ್ಕೆ ಯಾವ ಆಡಳಿತ ಶಕ್ತಿಗಳು ರಕ್ಷಣೆ ನೀಡುತ್ತಿದ್ದಾರೆ ಎಂದು ಕಳವಳಕಾರಿ ಪ್ರಶ್ನೆ ಮಾಡಿದ್ದಾರೆ.
ಗುಜರಾತಿನ ಬೊಟಾಡ್ ಮತ್ತು ನೆರೆಯ ಅಹಮದಾಬಾದ್ ಜಿಲ್ಲೆಗಳಲ್ಲಿ ಜುಲೈ 25 ರಂದು ವಿಷಕಾರಿ ಮದ್ಯ ಸೇವನೆ ಮಾಡಿದ 42 ಮಂದಿ ಮೃತಪಟ್ಟರು. ಸುಮಾರು 97 ಮಂದಿ ಭಾವನಗರ, ಬೊಟಾಡ್ ಮತ್ತು ಅಹಮದಾಬಾದ್ ಆಸ್ಪತ್ರೆಗಳಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗುಜರಾತ್ ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘವಿ ಹೇಳಿದ್ದರು.