ನವದೆಹಲಿ, ಜು 28 (DaijiworldNews/DB): ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಮಾತನಾಡುವ ವೇಳೆ ಬಾಯ್ತಪ್ಪಿನಿಂದಾಗಿ ರಾಷ್ಟ್ರಪತ್ನಿ ಎಂದಿದ್ದೆ. ಈ ಬಗ್ಗೆ ಅವರಲ್ಲಿಯೇ ನಾನು ಕ್ಷಮೆ ಕೋರುತ್ತೇನೆಯೇ ಹೊರತು ಕಪಟಿಗಳ ಬಳಿಯಲ್ಲ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಹೇಳಿದ್ದಾರೆ.
ರಾಷ್ಟ್ರಪತಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಕರೆದು ಬಿಜೆಪಿಯ ಆಕ್ರೋಶಕ್ಕೆ ಗುರಿಯಾಗಿರುವ ಚೌಧರಿ ಅವರು, ಸಣ್ಣ ವಿಚಾರವನ್ನೇ ಬಿಜೆಪಿ ದೊಡ್ಡದಾಗಿ ಬಿಂಬಿಸಿದೆ. ರಾಷ್ಟ್ರಪತಿಯವರಿಗೆ ಅಗೌರವ ತೋರುವ ಉದ್ದೇಶ ನನಗಿರಲಿಲ್ಲ. ಬಾಯ್ತಪ್ಪಿನಿಂದ ಆ ಪದ ಬಳಕೆ ಮಾಡಿದ್ದೆ. ಅದಕ್ಕಾಗಿ ರಾಷ್ಟ್ರಪತಿ ಮುರ್ಮು ಅವರ ಬಳಿಯೇ ಕ್ಷಮೆ ಕೇಳುತ್ತೇನೆ ಎಂದರು.
ನಾನು ಬಂಗಾಳಿಯವನಾಗಿದ್ದು, ಹಿಂದಿಯನ್ನು ಸುಲಲಿತವಾಗಿ ಮಾತನಾಡಲು ಬರುವುದಿಲ್ಲ. ಹೀಗಾಗಿ ತಪ್ಪು ಉಚ್ಚಾರ ನನ್ನಿಂದಾಗಿದೆ. ರಾಷ್ಟ್ರಪತಿಯನ್ನು ನಾಳೆ ಭೇಟಿಯಾಗಲು ಸಮಯ ಕೇಳಿದ್ದೇನೆ ಎಂದು ಅವರು ತಿಳಿಸಿದರು.
ಸಂಸತ್ತಿನಲ್ಲಿರುವ ಸೋನಿಯಾ ಗಾಂಧಿ ಕಚೇರಿಯಲ್ಲಿ ಅವರನ್ನು ಭೇಟಿಯಾದ ಬಳಿಕ ಚೌಧರಿ ಈ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.