ನೊಯ್ಡಾ, ಜು 28 (DaijiworldNews/DB): ಶಾಲೆಗೆ ಹೋಗುತ್ತಿದ್ದ ಬಾಲಕಿ ಮೇಲೆ ಯುವಕನೊಬ್ಬ ಅತ್ಯಾಚಾರ ಎಸಗಿ ತಪ್ಪಿಸಿಕೊಳ್ಳಲು ಯತ್ನಿಸಿದ ಘಟನೆ ನೊಯ್ಡಾದಲ್ಲಿ ನಡೆದಿದೆ. ಆರೋಪಿ ಮೇಲೆ ಪೊಲೀಸರು ಗುಂಡು ಹಾರಿ ಬಂಧಿಸಿದ್ದಾರೆ.
ಶಾಲೆಗೆ ಹೋಗುತ್ತಿದ್ದ 12 ವರ್ಷದ ಬಾಲಕಿಯನ್ನು 20 ವರ್ಷದ ಯುವಕ ಸೆಕ್ಟರ್ 32 ರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆ ಮೇಲೆ ಅತ್ಯಾಚಾರ ಎಸಗಿದ್ದ. ಈ ಸಂಬಂಧ ಸೆಕ್ಟರ್ 24ರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತತ್ಕ್ಷಣ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ಆತನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ಕರೆತರುವ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಬಾಲಕಿಯೊಂದಿಗೆ ಈ ಹಿಂದೆ ಆರೋಪಿ ಮಾತನಾಡಿದ್ದ ಎನ್ನಲಾಗಿದೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಪೋಕ್ಸೊ ಕಾಯ್ದೆ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ನೋಯ್ಡಾ) ರಣವಿಜಯ್ ಸಿಂಗ್ ತಿಳಿಸಿದ್ದಾರೆ.
ಸೆಕ್ಟರ್ 25 ರ ಪ್ರದೇಶದಲ್ಲಿ ತಲುಪುವ ವೇಳೆ ಪೊಲೀಸ್ ವ್ಯಾನ್ನಿಂದ ಜಿಗಿದು ನಿರ್ಜನ ಪ್ರದೇಶದ ಕಡೆಗೆ ಆರೋಪಿ ಪರಾರಿಯಾಗಲೆತ್ನಿಸಿದ್ದಾನೆ. ಈ ವೇಳೆ ಶೀಘ್ರ ಆತನನ್ನು ಪೊಲೀಸರು ಸುತ್ತುವರೆದರು. ಆತ ಇಟ್ಟಿಗೆ, ಕಲ್ಲು ಮುಂತಾದ ಕೈಗೆ ಸಿಕ್ಕ ವಸ್ತುಗಳನ್ನು ಪೊಲೀಸರತ್ತ ಎಸೆದನು. ಹೀಗಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಬೇಕಾಯಿತು. ಬಳಿಕ ಆತನನ್ನು ವಶಕ್ಕೆ ತೆಗೆದುಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದವರು ತಿಳಿಸಿರುವುದಾಗಿ ವರದಿಯಾಗಿದೆ.