ಲಕ್ನೋ, ಜು 27 (DaijiworldNews/MS):ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ವತಂತ್ರದೇವ್ ಸಿಂಗ್ ಬುಧವಾರ ರಾಜೀನಾಮೆ ನೀಡಿದ್ದಾರೆ.ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿದ್ದ ಅವರು ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಪಕ್ಷದ ನೂತನ ರಾಜ್ಯಾಧ್ಯಕ್ಷರನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ನೂತನ ಅಧ್ಯಕ್ಷರ ಘೋಷಣೆಯಾಗುವವರೆಗೂ ಪಕ್ಷದ ಕಾರ್ಯಕ್ರಮಗಳಲ್ಲಿ ಸ್ವತಂತ್ರದೇವ್ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ
ತಿಳಿಸಿದ್ದಾರೆ.
ಸ್ವತಂತ್ರದೇವ್ ಅವರನ್ನು ಜುಲೈ 16, 2019 ರಂದು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿಗಿತ್ತು. ಅವರ ಮೂರು ವರ್ಷಗಳ ಅವಧಿಯು ಜುಲೈ 16, 2022 ರಂದು ಕೊನೆಗೊಂಡಿತ್ತು.ಈ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಸ್ತುತ ಸ್ವತಂತ್ರದೇವ್ ರಾಜ್ಯ ಸರ್ಕಾರದಲ್ಲಿ ಜಲಸಚಿವರಾಗಿದ್ದಾರೆ. ಬಿಜೆಪಿಯಲ್ಲಿ ಒಬ್ಬನಿಗೆ ಒಂದು ಸ್ಥಾನ ಎಂಬ ತತ್ವವಿದ್ದು, ಹೀಗಿರುವಾಗ ಕಳೆದ ಮೂರು ತಿಂಗಳಿಂದ ನೂತನ ರಾಜ್ಯಾಧ್ಯಕ್ಷರ ನೇಮಕದ ಬಗ್ಗೆ ಊಹಾಪೋಹ ಎದ್ದಿತ್ತು. ಆದರೆ ಸ್ವತಂತ್ರದೇವ್ ಮೂರು ವರ್ಷಗಳ ಅವಧಿ ಪೂರ್ಣಗೊಂಡ ಬಳಿಕವಷ್ಟೇ ಸ್ವತಂತ್ರದೇವ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.