ಬೆಂಗಳೂರು, ಜು 28 (DaijiworldNews/DB): ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಯುವ ಮೋರ್ಚಾ ಕಾಯ್ಕರ್ತ ಪ್ರವೀಣ್ ನೆಟ್ಟಾರು ಅವರ ನಿವಾಸಕ್ಕೆ ಭೇಟಿ ನೀಡಲು ನಿರ್ಧರಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ಗುರುವಾರ ಮಾಹಿತಿ ನೀಡಿರುವ ಅವರು, ತನ್ನ ನೇತೃತ್ವದಲ್ಲಿನ ಸರ್ಕಾರ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಹಮ್ಮಿಕೊಂಡಿದ್ದ ಜನೋತ್ಸವ ಕಾರ್ಯಕ್ರಮವನ್ನು ಪಕ್ಷದ ಕಾರ್ಯಕರ್ತನ ಸಾವು ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ. ಮೃತ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳುತ್ತೇನೆ ಎಂದರು.
ಈ ನಡುವೆ ಇಂದು ಸಂಜೆ ಪ್ರವೀಣ್ ಮನೆಗೆ ಭೇಟಿ ನೀಡಲುದ್ದೇಶಿಸಿದ್ದ ಸಿಎಂ ಬೊಮ್ಮಾಯಿ ಅವರಿಗೆ ದ.ಕ. ಜಿಲ್ಲಾ ಭೇಟಿ ಸದ್ಯಕ್ಕೆ ಮುಂದೂಡುವುದು ಸೂಕ್ತ ಎಂದು ಎಡಿಜಿಪಿ ಅಲೋಕ್ಕುಮಾರ್ ಅವರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸದ್ಯಕ್ಕೆ ಸುಳ್ಯಕ್ಕೆ ಭೇಟಿ ನೀಡದಿರುವುದೇ ಉತ್ತಮ. ಪ್ರವೀಣ್ ಹತ್ಯೆ ಪ್ರಕರಣದ ನೈಜ ಆರೋಪಿಗಳ ಬಂಧನವಾದ ಬಳಿಕವೇ ಭೇಟಿ ನೀಡುವುದು ಒಳಿತು ಎಂಬುದಾಗಿ ಅಲೋಕ್ಕುಮಾರ್ ಅವರು ಸಿಎಂಗೆ ಸಲಹೆ ಮಾಡಿದ್ದಾರೆ ಎನ್ನಲಾಗಿದೆ.