ಬೆಂಗಳೂರು, ಜು 27 (DaijiworldNews/MS): "ಮಧ್ಯರಾತ್ರಿ ಓಡೋಡಿ ಬಂದು ಕಾರ್ಯಕ್ರಮವನ್ನು ರದ್ದುಗೊಳಿಸುವಷ್ಟು ಅನಿವಾರ್ಯತೆ ಸೃಷ್ಟಿಯಾಗಿದ್ದು ಈ ಸರ್ಕಾರದ ಅಸಲಿ ಸಾಧನೆಗೆ ಕನ್ನಡಿ ಹಿಡಿದಂತಾಗಿದೆ" ಎಂದು ಸಿಎಂ ಜನೋತ್ಸವ ಕಾರ್ಯಕ್ರಮ ರದ್ದುಗೊಳಿಸಿದ ಬಗ್ಗೆ ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ ಲೇವಡಿ ಮಾಡಿದ್ದಾರೆ.
ಬಿಜೆಪಿ ಕಾರ್ಯಕರ್ತ ಪ್ರವೀಣ ಹತ್ಯೆ ಹಿನ್ನೆಲೆ ಸ್ವ ಪಕ್ಷದ ಕಾರ್ಯಕರ್ತರ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಬಿಜೆಪಿ ಸರ್ಕಾರ ಇಂದು ಹಮ್ಮಿಕೊಂಡಿದ್ದ ಜನೋತ್ಸವ ಕಾರ್ಯಕ್ರಮ ತಡರಾತ್ರಿ ರದ್ದುಗೊಳಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕ ಖರ್ಗೆ "ಜನಪರ ಯೋಜನೆಯನ್ನೇ ರೂಪಿಸದ ಸರ್ಕಾರ ಜನೋತ್ಸವ ಎಂಬ ಕೃತಕ ಜನ ಬೆಂಬಲವನ್ನು ತೋರಿಸಲು ಹೊರಟಿತ್ತು. ಆದರೆ ಸರಕಾರದ ವೈಫಲ್ಯಕ್ಕೆ ಸಾಕ್ಷಿ ಎಂಬಂತೆ ಜನರ ಅಸಲಿ ಆಕ್ರೋಶವನ್ನ ಕಣ್ಣಾರೆ ಕಂಡಿತು. ಮಧ್ಯರಾತ್ರಿ ಓಡೋಡಿ ಬಂದು ಕಾರ್ಯಕ್ರಮವನ್ನು ರದ್ದುಗೊಳಿಸುವಷ್ಟು ಅನಿವಾರ್ಯತೆ ಸೃಷ್ಟಿಯಾಗಿದ್ದು ಈ ಸರ್ಕಾರದ ಅಸಲಿ ಸಾಧನೆಗೆ ಕನ್ನಡಿ ಹಿಡಿದಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇದಕ್ಕೂ ಮುಂಚೆ ಮಾಡಿದ್ದ ಟ್ವೀಟ್ ನಲ್ಲಿ "ದಕ್ಷಿಣ ಕನ್ನಡದ ಹಿಂದುಳಿದ ವರ್ಗದ ಯುವಕ ಪ್ರವೀಣ್ ಹತ್ಯೆ ಅತ್ಯಂತ ಬೇಸರದ ಸಂಗತಿ.ಒಂದೇ ವಾರದಲ್ಲಿ ಆಗಿರುವ 2ನೇ ಹತ್ಯೆ ಇದು, ಬಾಳಿ ಬದುಕಬೇಕಾದ ಜೀವಗಳು ದ್ವೇಷದ ಜ್ವಾಲೆಗೆ ಬಲಿಯಾಗುತ್ತಿರುವುದು ನಿಶ್ಚಿತವಾಗಿ ಸರ್ಕಾರದ ವೈಫಲ್ಯದಿಂದ.ಭ್ರಷ್ಟಾಚಾರವನ್ನೇ ಉಸಿರಾಡುವ ಈ ಸರ್ಕಾರದ ಕಾನೂನು ಸುವ್ಯವಸ್ಥೆಯ ವೈಫಲ್ಯವೇ ಈ ಎಲ್ಲಾ ಅನಾಹುತಗಳಿಗೆ ಹೊಣೆ ಎಂದು ಆರೋಪಿಸಿದ್ದರು.