ಬೆಂಗಳೂರು, ಜು 27 (DaijiworldNews/DB): ಅಧಿಕಾರಕ್ಕಿಂತ ಹಿಂದೂ ಕಾರ್ಯಕರ್ತರ ರಕ್ಷಣೆ ಮುಖ್ಯ. ಸರ್ಕಾರ ದುಷ್ಕರ್ಮಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಯೋಚಿಸುತ್ತಿದ್ದೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಚರ್ಚಿಸಿ ರಾಜೀನಾಮೆ ನಿರ್ಧಾರ ಕೈಗೊಳ್ಳಲಾಗುವುದು. ಹಿಂದೂ ಸಮಾಜ ನಮ್ಮ ಮೇಲೆ ಭರವಸೆ ಇಟ್ಟಿದೆ. ಅದನ್ನು ಉಳಿಸಿಕೊಳ್ಳಲು ದುಷ್ಕರ್ಮಿಗಳ ವಿರುದ್ದ ನಿರ್ದಾಕ್ಷೀಣ್ಯ ಕ್ರಮ ಅಗತ್ಯ. ಅಂತಹ ಕ್ರಮ ಆದಲ್ಲಿ ಮಾತ್ರ ಈ ಸರ್ಕಾರದಲ್ಲಿ ಮುಂದುವರಿಯುತ್ತೇನೆ ಎಂದರು.
ಕೆಲ ದಿನಗಳ ಹಿಂದೆ ನನಗೂ ಕೊಲೆ ಬೆದರಿಕೆ ಬಂದಿತ್ತು. ಆದರೆ ಈವರೆಗೆ ಬೆದರಿಕೆ ಹಾಕಿದಾತನನ್ನು ಪೊಲೀಸರು ಪತ್ತೆ ಹಚ್ಚಿಲ್ಲ. ರಾಜ್ಯದಲ್ಲಿ ಪದೇ ಪದೇ ಹಿಂದೂಗಳ ಹತ್ಯೆ ನಡೆಯುತ್ತಿದ್ದು, ಕಾರ್ಯಕರ್ತರೇ ನಮ್ಮ ವಿರುದ್ದ ರೊಚ್ಚಿಗೇಳುವ ಪರಿಸ್ಥಿತಿ ಬಂದಿದೆ. ಯೋಗಿ ಆದಿತ್ಯನಾಥ್ ಸರ್ಕಾರದ ಮಾದರಿಯಲ್ಲಿ ಕ್ರಮ ಕೈಗೊಂಡರೆ ಸರ್ಕಾರ, ಸಂಘಟನೆಗಳ ವರ್ಚಸ್ಸು ಉಳಿಯಬಹುದು. ನಮ್ಮ ಕಾರ್ಯಕರ್ತರನ್ನೇ ರಕ್ಷಣೆ ಮಾಡುವುದಕ್ಕೆ ನಮ್ಮಿಂದ ಸಾಧ್ಯವಾಗದಿದ್ದರೆ ಅಧಿಕಾರದಲ್ಲಿದ್ದು ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಭಾವಪೂರ್ಣ ಶ್ರದ್ಧಾಂಜಲಿ, ಕಠಿಣ ಕ್ರಮಕ್ಕೆ ಒತ್ತಾಯ, ದುಷ್ಕರ್ಮಿಗಳನ್ನು ಗಲ್ಲಿಗೇರಿಸಬೇಕು, ಓಂ ಶಾಂತಿ ಎಂದು ಕೇವಲ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕುವುದರಿಂದ ಪ್ರಯೋಜನವಿಲ್ಲ. ದುಷ್ಕರ್ಮಿಗಳನ್ನು ನಡು ರಸ್ತೆಯಲ್ಲಿಯೇ ಎನ್ಕೌಂಟರ್ ಮಾಡಿದರೆ ಮಾತ್ರ ಹಿಂದೂ ಕಾರ್ಯಕರ್ತರ ನಂಬಿಕೆ ಉಳಿಸಿಕೊಳ್ಳಲು ಸಾಧ್ಯ. ಪೌರುಷದ ಭಾಷಣ, ಹೇಳಿಕೆ ಜನರಿಗೆ ಬೇಕಾಗಿಲ್ಲ. ನಾವು ತೆಗೆದುಕೊಳ್ಳುವ ಕ್ರಮಗಳಷ್ಟೇ ಅವರಿಗೆ ಅಗತ್ಯ ಎಂದವರು ಆಕ್ರೋಶ ವ್ಯಕ್ತಪಡಿಸಿದರು.