ಕೋಲ್ಕತಾ, ಜು 27 (DaijiworldNews/DB): ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನ 30ಕ್ಕೂ ಹೆಚ್ಚು ಮಂದಿ ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದುತಿ, ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಸಚಿವ ಪಾರ್ಥ ಮತ್ತವರ ಆಪ್ತರಿಂದಾಗಿ ಟಿಎಂಸಿಯೊಳಗೆಯೇ ಗೊಂದಲಗಳುಂಟಾಗಿವೆ. ಸದ್ಯ ಆ ಪಕ್ಷದ ಮೂವತ್ತು ಮಂದಿ ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದು, ಇಪ್ಪತ್ತೊಂದು ಮಂದಿ ನನ್ನೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾರೆ ಎಂದರು.
ಪಾರ್ಥ ಅವರು ಹಗರಣದಲ್ಲಿ ಭಾಗಿಯಾಗಿಲ್ಲವೆಂದರೆ ಅವರು ಆತಂಕಪಡುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ ಅವರು, ಅವರು ಆರೋಪಿ ಎಂದು ಸಾಬೀತಾದರೆ ಅವರನ್ನು ಕಾಪಾಡುವುದು ಜಗತ್ತಿನ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ನಾನು ನಟನಾಗಿ ಎತ್ತರಕ್ಕೇರಲು ಹಿಂದೂಗಳು ಕಾರಣ. ಮುಸ್ಲಿಂ ಮತ್ತು ಸಿಖ್ಖರು ಕೂಡಾ ನನ್ನನ್ನು ಒಬ್ಬ ನಟನಾಗಿ ಪ್ರೀತಿಸುತ್ತಾರೆ ಎಂದು ಇದೇ ವೇಳೆ ತಿಳಿಸಿದರು.