ನವದೆಹಲಿ, ಜು 27 (DaijiworldNews/DB): ರಾಜ್ಯಸಭೆ ಕಲಾಪದಲ್ಲಿ ಅಮಾನತಾಗಿರುವ ಎಲ್ಲಾ 19 ಮಂದಿ ಸಂಸದರು ತಮ್ಮ ತಪ್ಪಿನ ಅರಿವಾಗಿ ವಿಷಾದ ವ್ಯಕ್ತಪಡಿಸಿದ್ದಲ್ಲಿ ಮಾತ್ರ ಅಮಾನತು ಹಿಂತೆಗೆದುಕೊಳ್ಳುವಿಕೆಯನ್ನು ಪರಿಗಣಿಸಬಹುದು ಎಂದು ಉಪ ರಾಷ್ಟ್ರಪತಿ ಮತ್ತು ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆನ್ನಲಾಗಿದೆ.
ಕಲಾಪಕ್ಕೆ ಅಡ್ಡಿ ಪಡಿಸಿದ ಕಾರಣಕ್ಕಾಗಿ 19 ಮಂದಿ ಸಂಸದರನ್ನು ನಿನ್ನೆ ಅಮಾನತು ಮಾಡಲಾಗಿತ್ತು. ಈ ಕುರಿತು ಬುಧವಾರ ಬೆಳಗ್ಗೆ ಸಭಾಪತಿಯವರು ವಿಪಕ್ಷ ನಾಯಕರು ಮತ್ತು ಇತರ ಸಚಿವರೊಂದಿಗೆ ಚರ್ಚಿಸಿದ್ದಾರೆ. ಅಲ್ಲದೆ, ಹತ್ತು ಮಂದಿ ಪ್ರತಿಪಕ್ಷ ನಾಯಕರು ಸಭಾಪತಿಯವರನ್ನು ಇಂದು ಬೆಳಗ್ಗೆ ಭೇಟಿಯಾಗಿ ಸದನಕ್ಕೆ ಉತ್ತಮ ಹಾಜರಾತಿ ನೋಡಿಕೊಳ್ಳಲು ಅಮಾನತು ಹಿಂಪಡೆಯುವಂತೆ ಸಲಹೆ ಮಾಡಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ, ಸಂಸದರು ಸದನದ ಬಾವಿಗೆ ನುಗ್ಗಿ ಘೋಷಣೆ ಕೂಗಿ ಕಲಾಪಕ್ಕೆ ಅಡ್ಡಿಪಡಿಸುವುದು ವಿಷಾದನೀಯ. ಹೀಗಾಗಿ ಕ್ರಮದ ಅಗತ್ಯತೆ ಇದೆ. ಅವರಿಗೆ ತಮ್ಮ ತಪ್ಪಿನ ಅರಿವಾಗಿ ವಿಷಾದ ವ್ಯಕ್ತಪಡಿಸಿದಲ್ಲಿ ಮಾತ್ರ ಅಮಾನತು ಹಿಂಪಡೆಯುವ ಬಗ್ಗೆ ಯೋಚಿಸಬಹುದು ಎಂದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ದನದ ಪ್ರತಿಷ್ಠೆ ಹಾಗೂ ಘನತೆ ಕಾಪಾಡಲು ಅಮಾನತು ಕ್ರಮವನ್ನು ಕೊನೆ ಹಂತದಲ್ಲಿ ಕೈಗೊಳ್ಳಲಾಗುವುದು. ಸಭಾಪತಿ ಅನುಭವಿಸುವ ನೋವು ವಿಪಕ್ಷಗಳು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ.
ಬೆಲೆ ಏರಿಕೆ ಕುರಿತು ವಿಷಯ ಪ್ರಸ್ತಾಪಿಸಿ ಬಳಿಕ ಸದನದ ಬಾವಿಗಿಳಿದು ಈ ಸಂಸದರು ಘೋಷಣೆಗಳನ್ನು ಕೂಗಿದ್ದರು. ಅಲ್ಲದೆ ಕಲಾಪಕ್ಕೆ ಅಡ್ಡಿಪಡಿಸಿದ್ದರು ಎಂದು ವರದಿಯಾಗಿದೆ.