ಕೋಲ್ಕತ್ತ, ಜು 27 (DaijiworldNews/DB): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಜನ ತಿರಸ್ಕರಿಸುವುದು ನಿಶ್ಚಿತ. 2024ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಾರದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಬುಧವಾರ ಈ ಕುರಿತು ಮಾತನಾಡಿದ ಅವರು, ಮೂರ್ನಾಲ್ಕು ಏಜೆನ್ಸಿಗಳನ್ನು ಬಳಸಿಕೊಂಡು ರಾಜ್ಯ ಸರ್ಕಾರಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವುದರಲ್ಲೇ ಬಿಜೆಪಿ ಸರ್ಕಾರ ನಿರತವಾಗಿದೆ. ಮಹಾರಾಷ್ಟ್ರ ಸರ್ಕಾರದ ಬಳಿಕ ಜಾರ್ಖಂಡ್ನಲ್ಲಿ ಈ ಕೆಲಸ ಮಾಡುತ್ತಿದ್ದಾರೆ. ಬಂಗಾಳದಲ್ಲಿ ಅವರನ್ನು ಸೋಲಿಸಿದ್ದು, ಬಂಗಾಳ ಒಡೆಯಲು ಅವರಿಂದ ಎಂದೂ ಸಾಧ್ಯವಿಲ್ಲ. ಮುಂದೆ ಅವರು ಕೇಂದ್ರದಲ್ಲಿಯೂ ಅಧಿಕಾರದಿಂದ ಕೆಳಗಿಳಿಯುವುದು ನಿಶ್ಚಿತ ಎಂದರು.
ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದು, ಇದರ ಪ್ರಮಾಣ ಶೇ 40ಕ್ಕೆ ಏರಿಕೆಯಾಗಿದೆ. ಬಂಗಾಳದಲ್ಲಿ ಇದೇ ಪ್ರಮಾಣ ಶೇ 45ಕ್ಕೆ ಇಳಿಕೆಯಾಗಿರುವುದು ನಮ್ಮ ಯಶಸ್ಸು. ಮಾಧ್ಯಮಗಳು ಜನರನ್ನೇ ಆರೋಪಿಗಳನ್ನಾಗಿಸುವ ಕೆಲಸ ಮಾಡುತ್ತಿವೆ. ಬಂಗಾಳದ ಬಗ್ಗೆ ಸುಳ್ಳು ಮಾಹಿತಿಗಳನ್ನು ಹರಡುವಲ್ಲಿ ಅವು ತೊಡಗಿಸಿಕೊಂಡಿವೆ ಎಂದು ಹರಿಹಾಯ್ದರು.