ನವದೆಹಲಿ, ಜು 27 (DaijiworldNews/DB): ದೆಹಲಿಯ ತಿಹಾರ್ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಹೂಡಿದ್ದ ಭಯೋತ್ಪಾದಕ ಯಾಸಿನ್ ಮಲಿಕ್ ರಕ್ತದೊತ್ತಡದಲ್ಲಿ ಏರುಪೇರಾದ ಕಾರಣ ಆತನನ್ನು ಆರ್ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
56 ವರ್ಷದ ಈತ ನಿಷೇಧಿತ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ ಮುಖ್ಯಸ್ಥನಾಗಿದ್ದು, ರುಬೈಯಾ ಸಯೀದ್ ಅಪಹರಣ ಪ್ರಕರಣದ ವಿಚಾರಣೆ ನಡೆಸುತ್ತಿರುವ ಜಮ್ಮು ನ್ಯಾಯಾಲಯಕ್ಕೆ ಭೌತಿಕವಾಗಿ ಹಾಜರಾಗಲು ಅವಕಾಶ ಕೇಳಿದ್ದ. ಆದರೆ ಆತನ ಮನವಿಗೆ ಕೇಂದ್ರ ಸ್ಪಂದಿಸಿರಲಿಲ್ಲ. ಇದಕ್ಕಾಗಿ ಕಳೆದ ಶುಕ್ರವಾರ ಬೆಳಗ್ಗೆಯಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಎನ್ನಲಾಗಿದೆ. ಹೀಗಾಗಿ ರಕ್ತೊದೊತ್ತಡ ಮಟ್ಟದಲ್ಲಿ ಏರುಪೇರಾಗಿತ್ತು ಎನ್ನಲಾಗಿದೆ.
ಆಸ್ಪತ್ರೆಗೆ ಕರೆದೊಯ್ಯುವ ಮುನ್ನ ಜೈಲಿನ ವೈದ್ಯಕೀಯ ತನಿಖಾ (ಎಂಐ) ಕೊಠಡಿಗೆ ಸ್ಥಳಾಂತರಿಸಿ 4 ದ್ರವಗಳನ್ನ ನೀಡಲಾಗಿತ್ತು. ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯ ಈತ ಭಯೋತ್ಪಾದನೆಗೆ ಧನಸಹಾಯ ನೀಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.