ಬೆಂಗಳೂರು, ಜು 27 (DaijiworldNews/DB): ಹಿಂದು ಸಂಘಟನೆಗಳ ಮೇಲೆ ಬುಲ್ಡೋಸರ್ ನುಗ್ಗಿಸಬೇಕೆಂದು ನಾನು ಕರೆಕೊಟ್ಟಿದ್ದೇನೆ ಎಂಬ ಅರ್ಥದಲ್ಲಿ ಪ್ರಕಟವಾಗಿದ್ದ ಪತ್ರಿಕಾ ವರದಿ ಸಂಪೂರ್ಣ ಸುಳ್ಳು. ಇದನ್ನು ವೈರಲ್ ಮಾಡುವುದನ್ನು ನಿಲ್ಲಿಸದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಶ್ರೀರಾಮಸೇನೆ, ಬಜರಂಗದಳ, ಆರೆಸ್ಸೆಸ್ ಮೇಲೆ ಬುಲ್ಡೋಜರ್ ನುಗ್ಗಿಸಬೇಕು ಎಂಬುದಾಗಿ ನಾನು ಹೇಳಿದ್ದೇನೆ ಎಂಬ ಅರ್ಥದಲ್ಲಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿಯನ್ನು ಬಿಜೆಪಿಯ ಹಲವು ಬೆಂಬಲಿಗರು ಹಂಚಿಕೊಂಡು ನನ್ನ ವಿರುದ್ದ ಅಪಪ್ರಚಾರ ನಡೆಸುತ್ತಿದ್ದಾರೆ. ಆದರೆ ನಾನು ಇಂತಹ ಹೇಳಿಕೆ ನೀಡಿಲ್ಲ. ಇದು ಸಂಪೂರ್ಣ ಸತ್ಯಕ್ಕೆ ದೂರವಾದ ವಿಚಾರ. ಈ ಪೋಸ್ಟ್ನ್ನು ವೈರಲ್ ಮಾಡುವುದನ್ನು ತತ್ಕ್ಷಣ ನಿಲ್ಲಿಸಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಅಲ್ಪಸಂಖ್ಯಾತರು, ಸೈದ್ದಾಂತಿಕ ವಿರೋಧಿಗಳ ಮನೆಮೇಲೆ ಬುಲ್ಡೋಜರ್ ಹರಿಸುತ್ತೇವೆ ಎಂಬ ಹಿಂಸಾತ್ಮಕ ಹೇಳಿಕೆಗಳನ್ನು ನೀಡುವುದೇ ಸರಿಯಲ್ಲ. ಇದಕ್ಕೆ ಪ್ರತಿಯಾಗಿ ಇನ್ನೊಂದು ಗುಂಪಿನವರು ಶ್ರೀರಾಮಸೇನೆ, ಬಜರಂಗದಳದವರ ಮನೆ ಮೇಲೆ ಬುಲ್ಡೋಜರ್ ಹತ್ತಿಸುತ್ತೇವೆ ಎನ್ನುತ್ತಾರೆ. ಇಂತಹ ಹೇಳಿಕೆಗಳಿಂದ ಶಾಂತಿ ಸಾಮರಸ್ಯಕ್ಕೆ ಭಂಗವಾಗುವುದರಿಂದ ಯಾರೂ ಇದಕ್ಕೆಲ್ಲ ಅವಕಾಶ ನೀಡಬಾರದು ಎಂದು ಹೇಳಿದ್ದೆ. ಆದರೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಮತ್ತು ಪತ್ರಿಕೆಯಲ್ಲಿ ತಿರುಚಿ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.