ನವದೆಹಲಿ, ಜು 27 (DaijiworldNews/DB): ಪ್ರಶ್ನೆ ಕೇಳಿದರೆ ಬಂಧಿಸುವುದು, ಸಂಸತ್ನಿಂದ ಅಮಾನತುಗೊಳಿಸುವುದು ನಡೆಯುತ್ತಿದೆ. ಸರ್ವಾಧಿಕಾರದ ವಿರುದ್ದ ಹೋರಾಡುವ ದಾರಿ ಬಗ್ಗೆ ನಮಗೆ ಗೊತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಜನ ಸಾಮಾನ್ಯರ ಜೀವನ ಕಷ್ಟಕರವಾಗಿದೆ. ಅಡುಗೆ ಅನಿಲ ಸಿಲಿಂಡರ್ ಬೆಲೆ 1053ರೂ.ಗೆ ತಲುಪಿದೆ. ಸಾಸಿವೆ ಎಣ್ಣೆಗೆ 200 ರೂ. ಮೊಸರಿನ ಮೇಲೆಯೂ ಜಿಎಸ್ಟಿ ವಿಧಿಸಿ ಜನಸಾಮಾನ್ಯರ ಬದುಕನ್ನು ಕಷ್ಟಕ್ಕೆ ದೂಡಲಾಗಿದೆ. ಆದರೆ ಇದನ್ನು ಪ್ರಶ್ನಿಸಿದರೆ ಸರ್ವಾಧಿಕಾರಿಗಳ ಧೋರಣೆ ತಾಳಿ ಸಂಸತ್ತಿನಿಂದ ಅಮಾನತುಗೊಳಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಶ್ನೆಗಳಿಗೆ ದೊರೆ ಹೆದರುತ್ತಿದ್ದಾನೆ. ಸಂಸತ್ತು ಪ್ರಜಾಪ್ರಭುತ್ವದ ದೇವಸ್ಥಾನವಿದ್ದಂತೆ. ಆದರೆ ಇಲ್ಲಿ ಪ್ರಶ್ನೆ ಮಾಡಿದ 23 ಸಂಸದರನ್ನು ಅಮಾನತು ಮಾಡಲಾಗಿದೆ. ದೇಶದ ಬೇರೆ ಬೇರೆ ಕಡೆ 57 ಸಂಸದರನ್ನು ಬಂಧನಕ್ಕೆ ಒಪ್ಪಿಸಲಾಗಿದೆ. ಇಂತಹ ದಾರಿಗಳ ಮುಖಾಂತರ ನಮ್ಮನ್ನು ಹೆದರಿಸಬಹುದೆಂಬ ಭ್ರಮೆ ಬೇಡ. ಹೋರಾಟದ ಹಾದಿಯ ಅರಿವು ನಮಗಿದೆ ಎಂದು ತಿರುಗೇಟು ನೀಡಿದರು.