ಬೆಂಗಳೂರು, ಜು 27 (DaijiworldNews/DB): ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಂತೆ ಬೊಮ್ಮಾಯಿ ಸರ್ಕಾರಕ್ಕೆ ಗಟ್ಸ್ ಇಲ್ಲ. ಕಾರಣ ಭಯ. ಕೇವಲ ಮತಕ್ಕಾಗಿ ಅಲ್ಲಾಡುತ್ತಿದ್ದಾರಷ್ಟೇ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ರಾಜ್ಯ ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ನಗರದಲ್ಲಿ ಬುಧವಾರ ಮಾತನಾಡಿದ ಅವರು, ಮೋದಿ, ಯೋಗಿಯ ಮಾದರಿಯಲ್ಲಿ ಸ್ಥೈರ್ಯವಾಗಲೀ, ಧೈರ್ಯವಾಗಲೀ ಇವರಿಗಲ್ಲ. ಆ ನೈತಿಕತೆ, ಮಾನಸಿಕತೆಯನ್ನೂ ಇವರು ಉಳಿಸಿಕೊಂಡಿಲ್ಲ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಲೆ, ಹಲ್ಲೆಯಂತಹ ಘಟನೆಗಳ ಸಂದರ್ಭದಲ್ಲಿ ಉಗ್ರ ಹೇಳಿಕೆಗಳು ಸರ್ಕಾರದಿಂದ ಬರುತ್ತವೆ. ಆದರೆ ಮುಂದೆ ಯಾವುದೇ ಕ್ರಮ ಇರುವುದಿಲ್ಲ. ಈವರೆಗಿನ ಘಟನೆಗಳಿಗೆ ಸಂಬಂಧಿಸಿದಂತೆ ಯಾವುದೇ ಕಠಿಣ ಪ್ರಕ್ರಿಯೆಗಳು ನಡೆದಿಲ್ಲ. ಪ್ರವೀಣ್ ಹತ್ಯೆಯಾಗಿರುವುದು ಇದೇ ಕಾರಣಕ್ಕೆ. ಕಾನೂನು ಮತ್ತು ಸರ್ಕಾರದ ವೈಫಲ್ಯಗಳಿಂದಾಗಿ ಪದೇಪದೇ ಘಟನೆಗಳು ಮರು ಕಳಿಸುತ್ತಿವೆ. ಹಿಂದೂಗಳ ಸುರಕ್ಷತೆ ಬಗ್ಗೆ ಬಿಜೆಪಿಗೆ ನಿಜವಾದ ಕಾಳಜಿ ಇದ್ದರೆ ಎಸ್ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಲಿ ಎಂದು ಆಗ್ರಹಿಸಿದರು.